ರೈತ ಹೋರಾಟ ಕಡೆಗಣಿಸಿದ ಸರ್ಕಾರ

26-RNR-03
Published on

ಹಾವೇರಿ: ಕೇಂದ್ರ ಮತ್ತು ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿ ಭಾಗದಲ್ಲಿ ನಡೆಸುತ್ತಿರುವ ಹೋರಾಟ 6 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ರೈತ ಸಂಘ, ಹಸಿರು ಸೇನೆಯ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಜಿಲ್ಲೆಯ ವಿವಿಧೆಡೆ ಕರಾಳ ದಿನ ಆಚರಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ದೆಹಲಿಯ ಗಡಿಭಾಗದಲ್ಲಿ ಅಖಿಲ ಭಾರತ ಕಿಸಾನ್ ಯೂನಿಯನ್ ರೈತ ಒಕ್ಕೂಟಗಳು ನಡೆಸುತ್ತಿರುವ ಚಳವಳಿ ಮೇ 26ಕ್ಕೆ 6 ತಿಂಗಳಾಗಿದೆ. ಇಡೀ ದೇಶ ಕರೊನಾ ಸೋಂಕಿನಿಂದ ತತ್ತರಿಸುತ್ತಿದ್ದರೂ ರೈತರು ಪ್ರಾಣದ ಹಂಗು ತೊರೆದು ಚಳವಳಿ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ರೈತರ ಚಳವಳಿಯನ್ನು ನಿರ್ಲಕ್ಷಿಸುತ್ತಿದೆ. ರೈತರ ಬೇಡಿಕೆಯಂತೆ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯುವ ಮೂಲಕ ರೈತರ ಹೋರಾಟವನ್ನು ಗೌರವಿಸಬೇಕು ಎಂದು ರೈತರು ಆಗ್ರಹಿಸಿದರು.

ಕಳೆದ ಎರಡು ವರ್ಷಗಳಿಂದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ಅನೇಕರು ಬೆಳೆಗಳನ್ನು ನಾಶ ಪಡಿಸುತ್ತಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಫಸಲು ಸಾಗಿಸಲಾಗದೇ ಸಿಕ್ಕಷ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇಂತಹ ರೈತರನ್ನು ಗುರುತಿಸಿ ಒಂದು ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು. 2015 ರಿಂದ 2021ರವರೆಗೆ ಮುಂಗಾರು ಹಾಗೂ ಹಿಂಗಾರು ಬೆಳೆವಿಮೆ ರೈತರಿಗೆ ಸಮರ್ಪಕವಾಗಿ ವಿತರಣೆಯಾಗಿಲ್ಲ. ಈ ಕುರಿತು ಅನೇಕ ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಕೂಡಲೆ ವಿಮಾ ಹಣವನ್ನು ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯಲ್ಲಿ ಅನೇಕ ಕುಟುಂಬಗಳು ಹೈನುಗಾರಿಕೆ ಮೇಲೆ ಅವಲಂಬಿತವಾಗಿದ್ದು, ಕಳೆದ 6 ತಿಂಗಳಿನಿಂದ ರೈತರಿಗೆ ಸಹಾಯಧನ ನೀಡಿಲ್ಲ. ಇದರಿಂದ ರೈತ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೂಡಲೆ ಸರ್ಕಾರ ಸಹಾಯಧನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ರೈತ ಸಂಘದ ಮುಖಂಡರಾದ ದೀಪಕ್ ಗಂಟಿಸಿದ್ದಪ್ಪನವರ, ಸುರೇಶ ಚಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net