

ಎನ್.ಮುನಿವೆಂಕಟೇಗೌಡ ಕೋಲಾರ
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಪಕ್ಕದಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿ ನಿಲಯಗಳ ಆವರಣದಲ್ಲಿ ಸ್ವಚ್ಛತೆ ಇಲ್ಲದೆ ಸೊರಗುತ್ತಿದ್ದು, ಕೆಲವು ವಸತಿ ನಿಲಯಗಳು ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಲೋಕೋಪಯೋಗಿ ಇಲಾಖೆಗೆ ಸೇರಿದ 62 ವಸತಿ ನಿಲಯಗಳಲ್ಲಿ 2 ವಸತಿ ನಿಲಯಗಳು ಪಾಳು ಬಿದ್ದಿದ್ದು, ಇದೇ ಜಾಗದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ 2 ವಸತಿ ನಿಲಯಗಳೂ ಇದ್ದು, ಪಾಳು ಬಿದ್ದ ಕೊಂಪೆಯಂತಾಗಿದೆ. ಕಿಟಕಿ ಬಾಗಿಲುಗಳು ಇಲ್ಲದೆ ಇಂದೋ-ನಾಳೆ
ಬೀಳುವ ಹಂತಕ್ಕೆ ತಲುಪಿವೆ.
ವಸತಿ ನಿಲಯಗಳಿಗೆ ಪ್ರವೇಶ ಮಾಡುತ್ತಿದ್ದಂತೆ ಚಿಕ್ಕಬಳ್ಳಾಪುರ ರಸ್ತೆಗೆ ಹೊಂದಿಕೊಂಡಿರುವ ಐದಾರು ವಸತಿ ನಿಲಯಗಳ ಪರಿಸ್ಥಿತಿಯು ಹೀಗೇ ಇದೆ. ವಸತಿ ನಿಲಯಗಳ ಅಕ್ಕಪಕ್ಕಗಳಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ದೊಡ್ಡ ದೊಡ್ಡ ಪೊದೆಗಳಾಗಿ ವಸತಿ ನಿಲಯಗಳನ್ನು ಆವರಿಸಿಕೊಂಡಿವೆ. ವಸತಿ ನಿಲಯದ ವಿಸ್ತೀರ್ಣ 2 ಎಕರೆಗಿಂತಲೂ ಹೆಚ್ಚಾಗಿದ್ದು, ಮನೆಗಳಿಗೆ ಹೋಗಲು ಇರುವ ರಸ್ತೆಗಳು ದುರಸ್ತಿ ಕಾಣದೆ ಚರಂಡಿಗಳಲ್ಲಿ ತ್ಯಾಜ್ಯ ತುಂಬಿದೆ. ವಾಸಿಸಲು ಯೋಗ್ಯವಾಗಿರುವ 60 ವಸತಿ ನಿಲಯಗಳಲ್ಲಿ ವಿವಿಧ ಇಲಾಖೆಗೆ ಸೇರಿದ ಸಿಬ್ಬಂದಿ ವಾಸವಿದ್ದಾರೆ. ವಾಸಿಸಲು ಯೋಗ್ಯವಲ್ಲದ ವಸತಿ ನಿಲಯಗಳಲ್ಲಿ ನಿರ್ವಹಣೆ ಮಾಡದೇ ಬಿಟ್ಟಿರುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.
ವಸತಿ ನಿಲಯಗಳ ಲೇಔಟ್ಗೆ ಹೋಗುವ ಮುಂಭಾಗದಲ್ಲಿ ಗೇಟ್ ಅಳವಡಿಸಿದ್ದು, ಅದರ ನಿರ್ವಹಣೆ ಇಲ್ಲದೇ ಹಗಲು ಮತ್ತು ರಾತ್ರಿ ಲೇಔಟ್ನಲ್ಲಿ ವಾಸಿಸುವ ಸರ್ಕಾರಿ ಇಲಾಖೆಯ ಅಧಿಕಾರಿಗಳಂತೆ ಇತರೇ ಸಾರ್ವಜನಿಕರೂ ಸಹ ಲೇಔಟ್ ಒಳಗೆ ಪ್ರವೇಶ ಮಾಡುತ್ತಿರುವುದರಿಂದ ಲೇಔಟ್ನಲ್ಲಿ ವಾಸಿಸುವ ಸರ್ಕಾರಿ ಅಧಿಕಾರಿಗಳ ಕುಟುಂಬಗಳಿಗೆ ಭದ್ರತೆ ಇಲ್ಲದಂತಾಗಿದೆ. ಲೋಕೋಪಯೋಗಿ ಲೇಔಟ್ನಲ್ಲಿ ವಿವಿಧ ಇಲಾಖೆಗೆ ಸೇರಿದ ಸರ್ಕಾರಿ ನೌಕರರು ವಾಸವಿದ್ದಾರೆ. 15 ರಿಂದ 20 ಡಿ.ಗ್ರೂಪ್ ನೌಕರರ ಕುಟುಂಬಗಳು 10 ರಿಂದ 15 ಸಿ.ಗ್ರೂಪ್ ನೌಕರರು ಲೋಕೋಪಯೋಗಿ ಇಲಾಖೆಗೆ ಸೇರಿದ 6 ಕುಟುಂಬ ಹಾಗೂ ನ್ಯಾಯಾಂಗ ಇಲಾಖೆಗೆ ಸೇರಿದ ಕುಟುಂಬಸ್ಥರು ವಾಸವಿದ್ದಾರೆ. ಶಿಕ್ಷಕರ ಕುಟುಂಬಗಳು ಹೆಚ್ಚಾಗಿ ವಾಸವಿದ್ದು, ಸುಮಾರು 20 ರಿಂದ 25 ವರ್ಷಗಳಿಂದ ವಾಸವಿರುವ ಕುಟುಂಬಗಳು ಇಲ್ಲಿದ್ದು, ಇಲಾಖೆಯವರು ನಿರ್ವಹಣೆ ಮಾಡುವ ಮೊದಲೇ ಸಣ್ಣಪುಟ್ಟ ರಿಪೇರಿ ಮಾಡಿಸಿಕೊಳ್ಳುತ್ತಿರುವುದರಿಂದ ಕೆಲವೊಂದು ವಸತಿ ನಿಲಯಗಳು ನೋಡಲು ಸುಂದರವಾಗಿ ಕಾಣುತ್ತಿವೆ.
ಪ್ರತಿವರ್ಷ ಸ್ವಚ್ಛತೆ ಮಾಡುತ್ತಿದ್ದೇವೆ. ಮಳೆ ಬಂದು ನಿಂತ ನಂತರ ಗಿಡ-ಗಂಟಿ ಹೆಚ್ಚಾಗಿ ಬೆಳೆದಿವೆ. ಅವುಗಳನ್ನು ತೆರವು ಮಾಡಲಾಗುವುದು. ಉಪಯೋಗ್ಯಕ್ಕೆ ಯೋಗ್ಯವಲ್ಲದ ಎರಡು ವಸತಿ ನಿಲಯಗಳನ್ನು ನೆಲಸಮ ಮಾಡಲು ಅನುಮತಿಗಾಗಿ ಕಾಯುತ್ತಿದ್ದೇವೆ. ಉಳಿದ 2 ವಸತಿ ನಿಲಯಗಳು ತೋಟಗಾರಿಕೆ ಇಲಾಖೆಗೆ ಸೇರಿದೆ. ಎಲ್ಲ ವಸತಿ ನಿಲಯಗಳಲ್ಲಿ ವಿವಿಧ ಇಲಾಖೆಯ ನೌಕರರು ವಾಸಿಸುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಬಾಡಿಗೆ ನೀಡುತ್ತಿದ್ದಾರೆ. ವಸತಿ ನಿಲಯಗಳಿಗೆ ಆಗಾಗ ಸುಣ್ಣಬಣ್ಣ ಬಳಿಯುತ್ತಿದ್ದೇವೆ. ಕುಟುಂಬಳಿಗೆ ಭದ್ರತೆ ಒದಗಿಸುವ ಕೆಲಸ ಮಾಡಲಾಗುವುದು. ರಸ್ತೆ ರಿಪೇರಿ ಮಾಡಲು ಅನುದಾನಕ್ಕಾಗಿ ಕಾಯಲಾಗುತ್ತಿದೆ. -ರಾಮಮೂರ್ತಿ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕೋಲಾರ