

ಮಂಡ್ಯ: ಸರ್ಕಾರಿ ಹಾಸ್ಟೆಲ್, ವಸತಿ ಶಾಲಾ ಹೊರಗುತ್ತಿಗೆ ನೌಕರರ ಮೇಲೆ ಗುತ್ತಿಗೆದಾರರು, ವಾರ್ಡನ್ಗಳು, ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಂದಾಗುತ್ತಿರುವ ಶೋಷಣೆ ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ನೌಕರರು, ಘೋಷಣೆಗಳನ್ನು ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ 15 ರಿಂದ 20 ವರ್ಷದಿಂದ ಕಡಿಮೆ ಸಂಬಳಕ್ಕೆ ವಸತಿ ನಿಲಯ-ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಡಿ ಗ್ರೂಪ್ ಅಟೆಂಡರ್, ಕಂಪ್ಯೂಟರ್ ಆಪರೇಟರ್, ನರ್ಸ್ಗಳಿಗೆ ಭದ್ರತೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಹೊರಗುತ್ತಿಗೆ ನೌಕರರ ಮೇಲೆ ಶೋಷಣೆ ಮಾಡಲಾಗುತ್ತಿದೆ. ಆದ್ದರಿಂದ ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು. ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು. 10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ತರಬೇಕು. ಕನಿಷ್ಟ ವೇತನ 31 ಸಾವಿರ ರೂ ನೀಡಬೇಕು. ಕಾರ್ಮಿಕ ಕಾನೂನು ಪ್ರಕಾರ ವಾರದ ರಜೆ ಕೊಡಬೇಕು. ಕೆಲಸದ ಸಮಯ ನಿಗದಿಯಾಗಬೇಕು ಸೇರಿದಂತೆ 21 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂತೋಷ್, ನಾಗರಾಜು, ಕೆ.ಜಗದೀಶ್, ಮಂಜು, ಎಸ್.ಜಯಲಕ್ಷ್ಮೀ, ಎಸ್.ಲಕ್ಷ್ಮೀ, ಮಂಜುನಾಥ, ಮಂಗಳಮ್ಮ, ನಾಗರತ್ನ, ಜಯಮ್ಮ, ಗೌರಮ್ಮ, ಮಹೇಶ್, ರಶ್ಮಿ, ಅನುಸೂಯಮ್ಮ, ಶಿವರತ್ನಮ್ಮ ಇದ್ದರು.