

ಚಿಕ್ಕಬಳ್ಳಾಪುರ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ನೇತೃತ್ವದ ಸದಸ್ಯರ ತಂಡವು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೋಷಕರು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ವೇಳೆ ಕಂಡು ಬಂದ ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ಸಮಸ್ಯೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡದಿರುವುದು, ಸಣ್ಣ ಪುಟ್ಟ ಕಾರಣಕ್ಕೂ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿಕೊಡುವುದು ಕಂಡು ಬಂದಿತು.
100 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದರೂ ಕೇವಲ 42 ಮಂದಿ ರೋಗಿಗಳು ಮಾತ್ರ ದಾಖಲಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಆಹಾರ ಆಯೋಗದ ಅಧ್ಯಕ್ಷರು, ನಿಮ್ಮಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ನೀವು ಮತ್ತು ನಿಮ್ಮ ಸಿಬ್ಬಂದಿ ರೋಗಿಗಳ ಜತೆ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ. ನಿಮ್ಮ ಮೇಲೆ ನಂಬಿಕೆ ಇಲ್ಲದ ಕಾರಣ, ಈ ಆಸ್ಪತ್ರೆಗೆ ರೋಗಿಗಳೇ ಬರುತ್ತಿಲ್ಲ ಎಂದು ಕಿಡಿ ಕಾರಿದರು.
ಒಂದು ತಿಂಗಳ ಅವಧಿಯಲ್ಲಿ ಕೇವಲ 17 ಹೆರಿಗೆ ಪ್ರಕರಣಗಳು ದಾಖಲಾಗಿದ್ದ ಬಗ್ಗೆ ತಿಳಿದು ತಾಲ್ಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಕೇವಲ 17 ಹೆರಿಗೆ ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದರೆ ಏನು ಅರ್ಥ? ಎಂದು ವೈದ್ಯಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಇಡೀ ರಾಜ್ಯದಲ್ಲಿ ಸುತ್ತಾಡಿದ್ದೇವೆ, ಇಷ್ಟು ಕಡಿಮೆ ರೋಗಿಗಳು ದಾಖಲಾಗಿರುವ ಆಸ್ಪತ್ರೆ ಇದು ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಸಾಮಾನ್ಯವಾಗಿ ಬಡವರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ ಎಂದರೆ ಒಂದು, ಎಲ್ಲರೂ ಇಲ್ಲಿ ಆಗರ್ಭ ಶ್ರೀಮಂತರಾಗಿರಬೇಕು, ಇಲ್ಲವೇ ನೀವು ಸರಿಯಾಗಿ ಔಷದೋಪಚಾರ ಮಾಡುತ್ತಿಲ್ಲ ಎಂದರ್ಥ ಎಂದು ಬೇಸರ ವ್ಯಕ್ತಪಡಿಸಿದರು.
ಆಹಾರ ಆಯೋಗದ ಸಮಿತಿ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್ ರಾವ್, ಮಾರುತಿ ದೊಡ್ಡಲಿಂಗಣ್ಣನವರ್, ರೋಹಿಣಿ ಪ್ರಿಯ, ವಿಜಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ವೆಂಕಟೇಶ್‌ರೆಡ್ಡಿ, ಆಹಾರ ಇಲಾಖೆ ಪ್ರಕಾಶ್, ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಇದ್ದರು