* ಬಡ, ಮಧ್ಯಮ ವರ್ಗದ ಜನರ ಆರೋಗ್ಯಕ್ಕೆ ಆಸರೆ
* ಉನ್ನತೀಕರಣಕ್ಕೆ ಬೇಡಿಕೆ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ನಗರದ ಹೃದಯ‘ ಭಾಗದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ತಾಲೂಕಿನ ಬಡಜನತೆಯ ಆರೋಗ್ಯ ರಕ್ಷಣೆಗೆ ಹತ್ತಾರು ವರ್ಷಗಳಿಂದ ಶ್ರಮಿಸುತ್ತಿರುವ ಹೆಗ್ಗಳಿಕೆ ಹೊಂದಿದೆ. ಇತರ ಸರ್ಕಾರಿ ಆಸ್ಪತ್ರೆಗಳಿಗೆ ಹೊಲಿಸಿದರೆ ಈ ಆಸ್ಪತ್ರೆ ನೂರು ಪಾಲು ಮೇಲು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದರೊಂದಿಗೆ ಹಲವು ಸಮಸ್ಯೆಗಳಿಂದ ನರಳುತ್ತಿರುವುದೂ ಅಷ್ಟೇ ಸತ್ಯ.
ಹೌದು.. ನಗರದ ಎಂ.ಜಿ. ರಸ್ತೆಯಿಂದ ಹಿಡಿದು ಜೆ.ಸಿ ರಸ್ತೆಯವರೆಗೂ ಇರುವ ಸಾರ್ವಜನಿಕ ಆಸ್ಪತ್ರೆ ತಾಲೂಕಿನ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯಕ್ಕೆ ಹಲವು ವರ್ಷಗಳಿಂದ ಆಸರೆಯಾಗಿದೆ. ಆದರೆ, ಬಡವರ ಸಂಜೀವಿನಿಯಾಗಬೇಕಾದ ಆಸ್ಪತ್ರೆ ಸಿಬ್ಬಂದಿ ಕೊರತೆ ಸೇರಿ ಹಲವು ಮೂಲ ಸೌಲಭ್ಯಗಳ ಸವಾಲನ್ನು ಎದುರಿಸುತ್ತಿದೆ.
ಪ್ರತಿನಿತ್ಯ ನೂರಾರು ಹೋರರೋಗಿಗಳು ಬಂದುಹೋಗುವ ಹಾಗೂ ಹತ್ತಾರು ಮಂದಿ ಒಳರೋಗಿಗಳು ದಾಖಲಾಗುವ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದೆ. ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಿಲ್ಲ. ಕಣ್ಣಿನ ವೈದ್ಯರು ರಜೆ ಮೇಲೆ ತೆರಳಿದ್ದಾರೆ. ಚರ್ಮರೋಗ ತಜ್ಞರ ಸ್ಥಾನವಿಲ್ಲ. ಎಂಬಿಬಿಎಸ್ ವೈದ್ಯರ ಕೊರತೆ ಇದೆ. ಇಬ್ಬರೂ ಪಿಜಿಶಿಯನ್ ಇರಬೇಕಾದ ಜಾಗದಲ್ಲಿ ಸದ್ಯ ಒರ್ವ ತಜ್ಞರು ಇದ್ದಾರೆ. ಆಸ್ಪತ್ರೆಯಲ್ಲಿ ಪಿಜಿಯೋಥೆರಪಿ ಕೇಂದ್ರವಿದ್ದರೂ ಸಿಬ್ಬಂದಿ ಕೊರತೆಯಿದೆ. ಗ್ರೂಪ್ ಡಿ ಸಿಬ್ಬಂದಿಯ ಕೊರತೆ ತೀವ್ರವಾಗಿ ಕಾಡುತ್ತಿದೆ.
ಫಾರ್ಮಸಿ ವಿಭಾಗದ ಮೂರು ಹುದ್ದೆಗಳು ಖಾಲಿ ಉಳಿದಿವೆ. ಕ್ಷ - ಕಿರಣ ತಂತ್ರಜ್ಞರ ಒಂದು ಹುದ್ದೆ ಖಾಲಿಯಿದೆ. ಸೂಕ್ತ ‘ದ್ರತಾ ಸಿಬ್ಬಂದಿಗಳಿಲ್ಲದ ಕಾರಣ ಆಸ್ಪತ್ರೆಯಲ್ಲಿ ಅ‘ದ್ರತೆ ಕಾಡುತ್ತಿದೆ. ಇತ್ತೀಚೆಗೆ ಆಸ್ಪತ್ರೆ ಆವರಣದಲ್ಲಿ ನಡೆದಿರುವ ಕೆಲ ಕಳವು ಪ್ರಕರಣಗಳು ಆಸ್ಪತ್ರೆಯ ‘ದ್ರತಾ ಕೊರತೆಗೆ ಉದಾಹರಣೆ ಎನ್ನಬಹುದು.
ಚನ್ನಪಟ್ಟಣದ ಜನಸಂಖ್ಯೆ ಆಧಾರದ ಮೇಲೆ ನಗರದ ಸಾರ್ವಜನಿಕ ಆಸ್ಪತ್ರೆಯನ್ನು ಉನ್ನತೀಕರಣ ಮಾಡಬೇಕಿದೆ. ವಿಶಾಲವಾದ ಜಾಗದಲ್ಲಿ ಜನರಲ್ ಮತ್ತು ತಾಯಿ-ಮಗು ಆಸ್ಪತ್ರೆಯನ್ನು ಒಂದೇ ಕಡೆ ನಿರ್ಮಿಸುವ ಕೆಲಸವಾಗಬೇಕಿದೆ. 20 ವರ್ಷದ ಹಿಂದಿನ ಜನಸಂಖ್ಯೆಗೂ ಈಗಿನ ಜನಸಂಖ್ಯೆಗೂ ಸಾಕಷ್ಟು ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಉನ್ನತೀಕರಣ ಮಾಡುವ ಅಗತ್ಯವಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಸಾಕಷ್ಟು ಆಧುನಿ ಸವಲತ್ತು ಕಲ್ಪಿಸಿದ್ದು, ಅದನ್ನು ಬಳಸಿಕೊಳ್ಳಲು ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಆಸ್ಪತ್ರೆ ಪಕ್ಕದಲ್ಲಿರುವ ಪಶುಗಳ ಆಸ್ಪತ್ರೆ ಹಾಗೂ ಕರಕುಶಲ ಕೇಂದ್ರದ ಸ್ಥಳಾಂತರ ಸಾಧ್ಯವಾದರೆ ಒಟ್ಟಿಗೆ ಜನರಲ್ ಹಾಗೂ ತಾಯಿ-ಮಗು ಆಸ್ಪತ್ರೆ ನಿರ್ಮಿಸಬಹುದು. ಇದಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕಿದೆ.
ಉಳಿದ ಸರ್ಕಾರಿ ಆಸ್ಪತ್ರೆಗಳಿಗೆ ಹೊಲಿಸಿದರೆ ಸ್ವಚ್ಛತೆ, ಸೂಕ್ತ ಸಲಕರಣೆಗಳು ಸೇರಿ ಎಲ್ಲ ಅನುಕೂಲಗಳಿವೆ. ಆದರೆ, ಯಾವ ವೈದ್ಯರೂ ಆಸ್ಪತ್ರೆಯ ಹೆಡ್ ಕ್ವಾರ್ಟರ್‌ನಲ್ಲಿ ಉಳಿಯದಿರುವುದು ಆಸ್ಪತ್ರೆಯ ಆಡಳಿತ ವೈಲ್ಯಕ್ಕೆ ಸಾಕ್ಷಿಯಾಗಿದೆ. ಆಸ್ಪತ್ರೆಯ ಹೆಡ್‌ಕ್ವಾರ್ಟರ್‌ನಲ್ಲಿ (ಮೂಲಸ್ಥಳದಲ್ಲಿ) ವೈದ್ಯರಿರಬೇಕು ಎಂಬುದು ಕಡ್ಡಾಯವಾಗಿದೆ. ಆದರೆ, ಬಹುತೇಕ ಯಾವ ವೈದ್ಯರು ನಿಯಮ ಪಾಲಿಸುತ್ತಿಲ್ಲ. ಅದರಲ್ಲೂ ತುರ್ತು ಅವಶ್ಯಕ ಎನ್ನಲಾದ ವೈದ್ಯರು ಯಾವುದೇ ಕಾರಣಕ್ಕೂ ಮೂಲಸ್ಥಳ ಬಿಡುವಂತಿಲ್ಲ. ಆದರೆ, ಹೆರಿಗೆ ತಜ್ಞರು ಸೇರಿ ತುರ್ತು ಅವಶ್ಯಕ ವೈದ್ಯರು ಯಾರೊಬ್ಬರೂ ಮೂಲಸ್ಥಳದಲ್ಲಿಲ್ಲ. ಇದರ ಬಗ್ಗೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಗಂಭೀರವಾದ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಆಸ್ಪತ್ರೆಯಲ್ಲಿರುವ ಾರ್ಮಸಿ ವಿಭಾಗದ ನಿರ್ವಹಣೆ ಇಡೀ ರಾಜ್ಯಕ್ಕೆ ಮಾದರಿ ಎಂದರೆ ತಪ್ಪಾಗಲಾರದು. ಆಸ್ಪತ್ರೆಯಲ್ಲಿ ಮೂರು ದಶಕಗಳಿಂದ ಸೇವೆ ಸಲ್ಲಿಸಿರುವ ಹಿರಿಯ ಫಾರ್ಮಸಿ ಅಧಿಕಾರಿ ಎಂ. ವೇದಮೂರ್ತಿ ಅವರು ಆಸ್ಪತ್ರೆಯ ಔಷಧಾಲಯವನ್ನು ಕ್ರಿಯಾತ್ಮಕವಾಗಿ ನಿರ್ವಹಣೆ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಹಲವು ವರ್ಷಗಳ ಹಿಂದೆ ಆಸ್ಪತ್ರೆ ಹೇಗಿತ್ತೋ ಈಗಲೂ ಹಾಗೇ ಇದೆ. ಈ ಹಿಂದಿನ ಶಾಸಕರು ಕಾಲಕಾಲಕ್ಕೆ ಆಸ್ಪತ್ರೆಯ ಸಮಸ್ಯೆ ಹಾಗೂ ಅಭಿವೃದ್ಧಿ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳದ ಕಾರಣ ಹಲವು ಸಮಸ್ಯೆ ಉದ್ಭವವಾಗಿವೆ. ಹಂತ ಹಂತವಾಗಿ ಎಲ್ಲ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು. ವೈದ್ಯರ ಕೊರತೆ ನೀಗಿಸುವ ಜತೆಗೆ ಮಧ್ಯಾಹ್ನದ ನಂತರ ಕೆಲ ವೈದ್ಯರು ಆಸ್ಪತ್ರೆಯಲ್ಲಿ ಸಿಗುವುದಿಲ್ಲ. ಹೊರಗಿನ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲು ಸೂಚಿಸುತ್ತಾರೆ. ಕೆಲವು ಔಷ‘ಗಳನ್ನು ಹೊರಗಿನಿಂದ ತರಿಸುತ್ತಾರೆ ಎಂಬೆಲ್ಲ ದೂರುಗಳಿವೆ. ಎಲ್ಲದರ ಬಗ್ಗೆ ಕ್ರಮಕೈಗೊಳ್ಳಲಾಗುವುದು.ಸಿ.ಪಿ.ಯೋಗೇಶ್ವರ್, ಶಾಸಕರು ಚನ್ನಪಟ್ಟಣ
==
ಕೆಲ ಪರೀಕ್ಷೆಗಳು ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಕಾರಣ, ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಲಭ್ಯವಿಲ್ಲದ ಪರೀಕ್ಷೆಗಳಿಗೆ ಜನಸಾಮಾನ್ಯರು ಖಾಸಗಿ ಲ್ಯಾಬ್ ಳನ್ನು ಅವಲಂಬಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಇರುವ ಲ್ಯಾಂಬ್ನ್ನು ಬೇರೆಡೆ ಸ್ಥಳಾಂತರಿಸುವ ಜತೆಗೆ, ಉನ್ನತ್ತಿಕರಿಸುವ ಕೆಲಸವೂ ಆಗಬೇಕಿದೆ. ಇದರೊಂದಿಗೆ, ಸಿಟಿ ಸ್ಕ್ಯಾನ್ ಸೇವೆಯೂ ಲಭ್ಯವಾದರೆ ಬಡಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ವೈದ್ಯರ ಕೊರತೆ ನೀಗಿಸುವ ಜತೆಗೆ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರೆ ಬಡಜನತೆಗೆ ಸಾಕಷ್ಟು ಅನುಕೂಲವಾಗಲಿದೆ.ವೈ.ಎಂ.ಸತೀಶ್, ಚನ್ನಪಟ್ಟಣ.