ಸಣ್ಣ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡಿದ ಸರ್ಕಾರ: ದೂರು

11
Published on

ಮೈಸೂರು: ರಾಜ್ಯ ಸರ್ಕಾರ ಇದೀಗ ಸಣ್ಣ ವ್ಯಾಪಾರಿಗಳಿಗೂ ಜಿಎಸ್‌ಟಿ ಹೆಸರಿನಲ್ಲಿ ಅಧಿಕ ತೆರಿಗೆ ವಿಧಿಸುವ ಮೂಲಕ ಅವರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಫಲಕ ಹಿಡಿದು ಪ್ರತಿಭಟಿಸಲಾಯಿತು.

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಮುಂಭಾಗ ಮಂಗಳವಾರ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ ಬಳಿಕ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಸಣ್ಣ ವ್ಯಾಪಾರಿಗಳಿಗೆ ರಾತ್ರೋರಾತ್ರಿ ಲಕ್ಷಾಂತರ ರೂ. ಜಿಎಸ್‌ಟಿ ಪಾವತಿಸುವಂತೆ ನೋಟಿಸ್ ನೀಡುವ ಮೂಲಕ ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಕೆಲಸಕ್ಕೆ ಸರ್ಕಾರ ಮುಂದಾಗಿದ್ದು, ಇದು ದಮನಕಾರಿ ನೀತಿಯಾಗಿದೆ ಎಂದು ಟೀಕಿಸಿದರು.

ಪ್ರತಿದಿನ ವ್ಯಾಪಾರ ಮಾಡದಿದ್ದರೆ ಊಟಕ್ಕೂ ಪರದಾಡುವ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ನೀಡಿದ್ದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬಂಧಪಟ್ಟವರು ತಕ್ಷಣ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಮೊದಲು ಸಣ್ಣಪುಟ್ಟ ವ್ಯಾಪಾರಿಗಳಲ್ಲಿ ಜಿಎಸ್‌ಟಿ ಪದ್ಧತಿ, ವ್ಯವಸ್ಥೆ ಬಗ್ಗೆ ಅರಿವು ಮೂಡಿಸಬೇಕು. ಹಾಗೆಯೇ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ದಂಡ ಶುಲ್ಕವಿಲ್ಲದೆ ಪಾವತಿಸಲು ಸಮಯಾವಕಾಶ ನೀಡಬೇಕು. ಇಲ್ಲವೆ ರದ್ದುಪಡಿಸಿ ಹೊಸದಾಗಿ ತೆರಿಗೆ ಪರಿಗಣಿಸಬೇಕು. ಈ ಮೂಲಕ ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು

ಮುಖಂಡರಾದ ಪರಮೇಶ್‌ಗೌಡ, ಪ್ರಮೋದ್‌ಗೌಡ, ಅಭಿ, ಎಸ್.ಎನ್.ರಾಜೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net