

ತುಮಕೂರು: ಚುನಾವಣೆಯಲ್ಲಿ ಗೆದ್ದಿರುವ ಗ್ರಾಪಂ ಸದಸ್ಯರೆಲ್ಲ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ ಸರ್ಕಾರ ರಾಜ್ಯಪತ್ರ ಪ್ರಕಟಿಸಿದ್ದು, ವರ್ಗವಾರು ಸಂಖ್ಯೆ ನಿಗದಿಗೊಳಿಸಿದ್ದು ಶೀಘ್ರದಲ್ಲಿಯೇ ಜಿಲ್ಲಾಡಳಿತ ಮೀಸಲಾತಿ ಪ್ರಕಟಿಸಲಿದೆ.
ಜಿಲ್ಲೆಯ 327 ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ವಿವಿಧ ಕಾರಣಕ್ಕೆ ಚುನಾವಣೆ ಮುಂದೂಡಿಕೆಯಾಗಿರುವ ಮೂರು ಗ್ರಾಪಂಗೆ ಸ್ಥಳೀಯರ ಮನವೊಲಿಸಿ ಚುನಾವಣೆ ನಡೆಸುವ ಅನಿವಾರ್ಯತೆಯೂ ಇದೆ. ತಾಲೂಕುವಾರು ಮೀಸಲಾತಿ ಪ್ರಕಟಿಸಿದ್ದು ಇದರಲ್ಲಿ ಶೇ.50 ಸ್ಥಾನಗಳು ಆಯಾ ಮೀಸಲಾತಿಯ ಮಹಿಳೆಯರಿಗೆ ಸೀಮಿತವಾಗಿವೆ.
ಬರೋಬ್ಬರಿ 5 ವರ್ಷಕ್ಕಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಅಧಿಕಾರವಧಿ 30 ತಿಂಗಳಿಗೆ ಕಡಿತವಾಗಿದ್ದು, ಅವಿಶ್ವಾಸ ನಿರ್ಣಯ ಮಂಡಿಸಲು ಕನಿಷ್ಠ 15 ತಿಂಗಳು ಕಳೆಯಬೇಕಿದೆ. ಈ ಹಿಂದಿನ ವರ್ಷದಲ್ಲಿ ನಿಗದಿಪಡಿಸಿದ್ದ ಮೀಸಲಾತಿ ಪರಿಗಣಿಸಿ 2020ರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಮೀಸಲಾತಿ ನಿಗದಿಪಡಿಸಲು ಸೂಚಿಸಲಾಗಿದೆ.
ಚುನಾವಣೆ ನಡೆಸುವ ಸಂಪೂರ್ಣ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದ್ದು, ಎಸ್ಸಿ, ಎಸ್ಟಿ ಹುದ್ದೆಗಳನ್ನು ಆಯಾ ತಾಲೂಕಿನ ಜನಸಂಖ್ಯೆ ಆಧಾರದ ಮೇಲೆ ನಿಗದಿ ಮಾಡಲಾಗಿದ್ದು ಜಿಲ್ಲಾಧಿಕಾರಿ ಮೀಸಲಾತಿ ಪ್ರಕಟಿಸಬೇಕಿದೆ. ಹೆಚ್ಚು ಮಹಿಳಾ ಸದಸ್ಯರಿರುವ ಗ್ರಾಪಂ ಮಹಿಳಾ ಅಧ್ಯಕ್ಷೆ, ಉಪಾಧ್ಯಕ್ಷೆ ಪಡೆಯಲಿದೆ. ಆದರೆ, ಹಿಂದಿನ ಅವಧಿಯಲ್ಲಿ ಮಹಿಳೆಯರಿದ್ದರೆ ಈಗ ಬದಲಾಯಿಸಲು ಅವಕಾಶವಿದೆ.
ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ!?: ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಮಾರ್ಗಸೂಚಿಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಾಗುವಂತೆ ಕಾನೂನು ರಚಿಸಲಾಗಿದೆ ಎಂಬ ಮಾತು ಕೇಳಿಬಂದಿದೆ. 2015ರಲ್ಲಿ ಐದು ವರ್ಷ ಕಾಲಾವಧಿಗೆ ಎಲ್ಲ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ನೂತನ ಸದಸ್ಯರ ಸಮ್ಮುಖದಲ್ಲಿಯೇ ಲಾಟರಿ ಮೂಲಕ ನಿಗದಿ ಮಾಡಲಾಗಿತ್ತು.
ಈ ಬಾರಿ ಕೆಲವು ಪ್ರಕರಣಗಳಲ್ಲಿ ಲಾಟರಿ ಆಯ್ಕೆಗೆ ಅವಕಾಶ ನೀಡಿದ್ದು ಹಿಂದಿನ ಮೀಸಲಾತಿ ಅವಲೋಕಿಸಿಕೊಂಡು ಗ್ರಾಪಂನಲ್ಲಿ ಹೆಚ್ಚು ಸದಸ್ಯರಿರುವ ವರ್ಗಗಳಿಗೆ ಮೀಸಲು ನಿಗದಿ ಮಾಡಲು ಜಿಲ್ಲಾ ಚುನಾವಣಾಧಿಕಾರಿಗೆ ಅವಕಾಶ ನೀಡಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಒಂದೇ ಮೀಸಲಾತಿಗೆ ಇರದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಲಾಟರಿ ಮೂಲಕ ನಿಗದಿ ಯಾವಾಗ?: ಯಾವ ವರ್ಗದ ಸದಸ್ಯರ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಯೊ ಅವರಿಗೆ ಮೀಸಲಾತಿ ನಿಗದಿಯಲ್ಲಿ ಆದ್ಯತೆ ನೀಡಲು ಸೂಚಿಸಲಾಗಿದೆಯಾದರೂ ಎರಡು ವರ್ಗದ ಸದಸ್ಯ ಸ್ಥಾನಗಳು ಸಮ ಪ್ರಮಾಣದಲ್ಲಿದ್ದರೆ ಅಂತಹ ಸಂದರ್ಭದಲ್ಲಿ ಆಯಾ ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಲಾಟರಿ ಮೂಲಕ ಮೀಸಲು ನಿಗದಿ ಮಾಡಲು ಅವಕಾಶವಿದೆ. ಇಂತಹ ಸಂದರ್ಭ ಅಪರೂಪವಾಗಿರುವ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಆಯ್ಕೆ ನಡೆಯುವ ಸಾಧ್ಯತೆ ಕ್ಷೀಣಿಸಿದೆ.