ರೈತರಿಗೆ ಬಲ ನೀಡಲು ಒಕ್ಕೂಟ ಯೋಜನೆ

web 1
Published on

ಚಿಕ್ಕಮಗಳೂರು: ಬೆವರು ಹರಿಸಿ ದುಡಿಮೆ ಮಾಡುವುದು, ಪಟ್ಟ ಪರಿಶ್ರಮಕ್ಕೆ ಒಂದಷ್ಟು ಆದಾಯ ಗಳಿಸುವುದಕ್ಕೆ ರೈತರ ಜೀವನ ಸೀಮಿತವಾಗಬಾರದು. ರೈತರೂ ಭರವಸೆಯ ಭವಿಷ್ಯ ಕಟ್ಟಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಸ್ವಾವಲಂಬಿಗಳಾಗಿಸಲು ರೈತ ಉತ್ಪಾದಕ ಕಂಪನಿ ರಚಿಸುವ ಯೋಜನೆ ರೂಪಿಸಿವೆ.

50 ರೈತರ ಗುಂಪುಗಳನ್ನು ಕಟ್ಟಿಕೊಂಡು ಅಂತಹ ಹತ್ತಾರು ಗುಂಪುಗಳು ಒಗ್ಗೂಡಿ ಎಫ್​ಪಿಸಿಎಲ್(ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್) ರಚನೆ ಮಾಡಿಕೊಳ್ಳಲಾಗುವುದು. ಕಂಪನಿಯ ಸದಸ್ಯರ ಪಾಲು ಹಣವನ್ನು ಆಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾನ ಅನುದಾನವನ್ನು ಒದಗಿಸುವ ಮೂಲಕ ಸಹಯೋಗ ನೀಡುತ್ತವೆ. ಅಷ್ಟೂ ರೈತರು ಸೇರಿ ಹುಟ್ಟುಹಾಕಿದ ಆ ಕಂಪನಿ ಆರ್ಥಿಕ ಸಬಲೀಕರಣ ಸಾಧಿಸಿ ಸ್ವತಂತ್ರವಾಗಿ ರೈತರಿಗೆ ಅನುಕೂಲವಾಗುವ ವಹಿವಾಟು ನಡೆಸಲು ಸಮರ್ಥವಾಗುತ್ತದೆ. ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೂ ನೀಡಬಹುದು. ಜತೆಗೆ ಎಲ್ಲೆಲ್ಲಿಂದಲೋ ಅಸುರಕ್ಷಿತ ಹಾದಿಯಲ್ಲಿ ಸಾಲ ತಂದು ಆತ್ಮಹತ್ಯೆ ಹಾದಿ ಹಿಡಿಯದಿರುವಂತೆ ರೈತರಿಗೆ ಸಹಕಾರ ತತ್ವದ ಮೇಲೆ ಸಾಲ ವಿತರಣೆ ಭರವಸೆಯ ಸಂಸ್ಥೆಯೂ ಆಗಬೇಕೆಂಬುದು ಯೋಜನೆಯ ಪರಿಕಲ್ಪನೆ.

ಒಂದು ರೈತ ಉತ್ಪಾದಕರ ಕಂಪನಿ ಸ್ವಾಮ್ಯಕ್ಕೆ ಕನಿಷ್ಠ 50 ರೈತರ ಆಸಕ್ತ ಗುಂಪುಗಳು (ಎಫ್​ಐಜಿ) ಒಳಪಡಲಿವೆ. ಈ ಗುಂಪುಗಳಲ್ಲಿರುವ ಒಂದು ಸಾವಿರ ರೈತರು ತಲಾ ಒಂದು ಸಾವಿರ ರೂ.ನಂತೆ ಷೇರು ಹಣವನ್ನು ಪಾವತಿಸಬೇಕಿದೆ. ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ವನ್ನು ಸಮಾನ ಅನುದಾನವನ್ನು ನೀಡಲಾಗುವುದು. ಇದೇ ರೀತಿ ಕೇಂದ್ರ ಸರ್ಕಾರದ ಎಸ್​ಎಫ್​ಎಟಿ (ಸಣ್ಣ ರೈತರ ವ್ಯಾಪಾರ ಒಕ್ಕೂಟ)ಯಿಂದ 10 ಲಕ್ಷ ರೂ. ಸಮಾನ ಅನುದಾನ ನೀಡಲಿದೆ. ಈ ಸಂಸ್ಥೆಯಿಂದ ಗರಿಷ್ಠ 15 ಲಕ್ಷ ರೂ.ವರೆಗೂ ಅವಕಾಶವಿದೆ.

ಕಳೆದ ನವೆಂಬರ್​ನಲ್ಲಿ ಎಫ್​ಐಜಿ ರಚನೆ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯ ಕೃಷಿ ಇಲಾಖೆಯಿಂದ 5 ರೈತರ ಆಸಕ್ತ ಗುಂಪುಗಳನ್ನು ರಚಿಸಲಿದ್ದು, ಈಗಾಗಲೇ 100 ಎಫ್​ಐಜಿಗಳ ರಚನೆಯಾಗಿದೆ. ಅಂತೆಯೇ ತೋಟಗಾರಿಕೆ ಇಲಾಖೆಯಿಂದ 3 ಎಫ್​ಐಜಿಗಳನ್ನು ರಚಿಸಲಾಗುವುದು.

ಜಿಲ್ಲಾ ಯೋಜನಾ ಉಸ್ತುವಾರಿ ಸಮಿತಿ: ಈ ಯೋಜನೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚನೆಗೊಂಡಿದ್ದು, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ನೋಡಲ್ ಕಾರ್ಯದರ್ಶಿಯಾಗಿದ್ದಾರೆ. ಪಶುಸಂಗೋಪನಾ ಇಲಾಖೆ ಸ್ವಾಮ್ಯದಲ್ಲಿ ಕುರಿ ಮತ್ತು ಮೇಕೆ ಸಾಕಣೆ ಸಲುವಾಗಿ 2 ಎಫ್​ಪಿಸಿಎಲ್​ಗಳ ರಚನೆ ಮಾಡಲಾಗುವುದು. ಇದಕ್ಕಾಗಿ ರೈತರಿಗೆ ಅಗತ್ಯ ತರಬೇತಿ ನೀಡಲಾಗುವುದು. ಹೊಸ ವ್ಯವಸ್ಥೆ ಅರ್ಥಮಾಡಿಕೊಳ್ಳಲು ಪ್ರವಾಸ ಏರ್ಪಡಿಸಲಾಗುತ್ತದೆ.

ಸ್ವಯಂಸೇವಾ ಸಂಸ್ಥೆಯಿಂದ ಚಾಲನೆ: ರಾಜ್ಯದಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಬೇಕೆಂದು ತೋಟಗಾರಿಕೆ, ಕೃಷಿ, ಜಲಾನಯನ ಇಲಾಖೆ ಹಾಗೂ ನಬಾರ್ಡ್ ಮೂಲಕ ಚಿಂತನೆ ನಡೆಸಲಾಗಿದೆ. ಈಗಾಗಲೇ ರಾಜ್ಯಮಟ್ಟದಲ್ಲಿ ಟೆಂಡರ್ ಕರೆದು ಜನಸ್ಪಂದನ ಎಂಬ ಸ್ವಯಂ ಸೇವಾ ಸಂಸ್ಥೆ ಮೂಲಕ ಯೋಜನೆಗೆ ಚಾಲನೆ ನೀಡಿದ್ದು, ಕಳೆದ ನವೆಂಬರ್​ನಿಂದಲೇ ಕಾರ್ಯಾರಂಭವಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ರೈತರು ಬೇಕಾದ ಅಗತ್ಯ ವಸ್ತುಗಳನ್ನು ಅಂಗಡಿಗಳಿಂದ ಅಧಿಕ ದರಕ್ಕೆ ಖರೀದಿ ಮಾಡುತ್ತಿದ್ದಾರೆ. ಅದೇ ಒಕ್ಕೂಟ ರಚನೆಯಾಗಿ ವಹಿವಾಟು ಆರಂಭವಾದರೆ ಗೊಬ್ಬರ, ಔಷಧ ಮತ್ತಿತರ ವಸ್ತುಗಳು ಅಗ್ಗದ ದರದಲ್ಲಿ ರೈತರ ಕೈಗೆಟುಕುತ್ತವೆ. ರೈತರ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಿಕ್ಕೂ ಅನುಕೂಲವಾಗುತ್ತದೆ. ಒಬ್ಬೊಬ್ಬರೇ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವ ವ್ಯವಸ್ಥೆಯಲ್ಲಿ ಸಿಕ್ಕಿದ ದರಕ್ಕೆ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರೈತರ ವಸ್ತುಗಳನ್ನೂಲೋಡುಗಟ್ಟಲೆ ಸಾಗಿಸಿ ವಿಲೇವಾರಿ ಮಾಡುವುದರಿಂದ ಸಾಗಣೆ ವೆಚ್ಚ ಹಂಚಿಕೊಂಡಲ್ಲಿ ಬಹಳಷ್ಟು ಉಳಿತಾಯವಾಗುತ್ತದೆ. ಮಾರುಕಟ್ಟೆಯಲ್ಲಿ ದರದ ಸ್ಥಿರತೆ ಕಾಯ್ದುಕೊಳ್ಳಲಿಕ್ಕೂ ಅನುಕೂಲ.

ಕಾರ್ವಿುಕರ ಕೊರತೆ ನೀಗಿಸುವ ಯಂತ್ರಗಳು;ಇತ್ತೀಚಿನ ದಿನಗಳಲ್ಲಿ ಕೃಷಿಕರ ಮಕ್ಕಳು ವಿದ್ಯೆಯ ನೆಪದಲ್ಲಿ ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದಾರೆ. ಆದರೆ ಕೃಷಿಕರ ಮಕ್ಕಳು ಕೃಷಿಯನ್ನೇ ಅವಲಂಬಿಸಿ ಲಾಭದಾಯಕ ಮಾಡಿಕೊಳ್ಳಬಹುದು. ಓದಿದ ಮಾತ್ರಕ್ಕೆ ಕೃಷಿಯಿಂದ ವಿಮುಖರಾಗಬೇಕೆಂದೇನಿಲ್ಲ. ಆದರೆ ಯುವಜನರಲ್ಲಿ ಉದ್ಯೋಗ ಮಾಡುವ ಒಲವು ಹೆಚ್ಚುತ್ತಿದೆ. ಎಸ್​ಎಸ್​ಎಲ್​ಸಿ, ಪದವಿ ಉತ್ತೀರ್ಣರಾಗಲಿ, ಅನುತ್ತೀರ್ಣರಾಗಲಿ ಪೇಟೆ, ಪಟ್ಟಣಗಳತ್ತ ಮುಖ ಮಾಡಿ ಮೊಬೈಲ್ ದುರಸ್ತಿ ಕೇಂದ್ರ, ಜೆರಾಕ್ಸ್ ಕೇಂದ್ರಗಳನ್ನು ಆರಂಭಿಸುವ ಮೂಲಕ ಜೀವನ ಮಾಡುವ ಉದ್ದೇಶ ಹೆಚ್ಚಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಕಾರ್ವಿುಕರ ಕೊರತೆ ಹೆಚ್ಚಲು ಕಾರಣವಾದ ಈ ಸಮಸ್ಯೆಗೆ ಪರ್ಯಾಯವಾಗಿ ನಮ್ಮ ಉತ್ಪಾದನೆಗೆ ಅಡಚಣೆಯಾಗಬಾರದೆಂಬ ಕಾರಣಕ್ಕೆ ಪ್ರತಿ ವರ್ಷ ಕೃಷಿ ವಿಶ್ವವಿದ್ಯಾಲಯಗಳು ಹೊಸ ಹೊಸ ಯಂತ್ರೋಪಕರಣಗಳನ್ನು ತಯಾರು ಮಾಡುತ್ತಿವೆ. ಇದಕ್ಕೆ ಸರ್ಕಾರವೂ ಉತ್ತೇಜನ ನೀಡುತ್ತಿದೆ. ಸ್ವಲ್ಪಮಟ್ಟಿಗೆ ಕೃಷಿ ಕಾರ್ವಿುಕರ ಕೊರತೆಯನ್ನು ಈ ಯಂತ್ರೋಪಕರಣಗಳು ನೀಗಿಸಿವೆ. ಇಂತಹ ಸಮಸ್ಯೆಗೆ ರೈತರ ಒಕ್ಕೂಟ ರಚನೆ ಪರಿಹಾರ ಒದಗಿಸಲಿದೆ.

ಸಣ್ಣ ಯಂತ್ರೋಪಕರಣಕ್ಕೆ ಬೇಡಿಕೆ:ಅಮೆರಿಕದಂತಹ ದೇಶದಲ್ಲಿ ರೈತರು ಸಾವಿರಾರು ಎಕರೆ ಜಮೀನುಗಳ ಮಾಲೀಕತ್ವ ಹೊಂದಿರುವುದರಿಂದ ಯಂತ್ರಗಳಲ್ಲಿ ಅನಾಯಾಸವಾಗಿ ಕೃಷಿ ನಿರ್ವಹಣೆ ಮಾಡುತ್ತಿದ್ದಾರೆ. ಭಾರತದಂತಹ ದೇಶದಲ್ಲಿ ತುಂಡು ಭೂಮಿಗಳೇ ಹೆಚ್ಚಾಗಿದ್ದು, ಮಿತಿಯೊಳಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇಲ್ಲಿಗೆ ಸಣ್ಣ ಸಣ್ಣ ಯಂತ್ರಗಳ ಅಗತ್ಯವಿದ್ದು, ಇನ್ನೂ ಸಂಶೋಧನೆಯ ಹಂತದಲ್ಲಿವೆ. ಆದರೆ ಹೂಡಿಕೆ ಅಧಿಕವಾಗಿ ರೈತರಿಗೆ ಭಾರವಾಗುವುದರಿಂದ ಪ್ರತಿಯೊಬ್ಬರೂ ಈ ರೀತಿ ಯಂತ್ರಗಳನ್ನು ಹೊಂದುವುದು ಕಷ್ಟವಾಗಬಹುದು. ಈಗಾಗಲೇ ಭತ್ತ, ಕಬ್ಬು, ರಾಗಿಗೆ ಬಿತ್ತನೆ, ಕಟಾವಿಗೆ ಯಂತ್ರಗಳು ಬಂದಿವೆ. ಹೀಗೆ ಸ್ವಲ್ಪಮಟ್ಟಿಗೆ ಕಾರ್ವಿುಕರ ಕೊರತೆ ನೀಗಿದೆ. ಇಂತಹ ಸಮಸ್ಯೆಗಳಿಗೆ ಕಂಪನಿ ರಚನೆಯಿಂದ ಪರಿಹಾರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net