ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅಲೆಮಾರಿ ಜನಾಂಗದ ಎಲ್ಲರಿಗೂ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಟೆಂಟ್ ಮುಕ್ತ ಕರ್ನಾಟಕ ನಿಮಾರ್ಣದ ಗುರಿ ಹೊಂದಲಾಗಿದೆ ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷö್ಮ ಸಮುದಾಯಗಳ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಅಧೀನದ ನಿಗಮಗಳಡಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರವು ಗೃಹಜ್ಯೋತಿ ಯೋಜನೆಯಡಿ ಪ್ರತಿಯೊಂದು ಮನೆಗೂ 200 ಯುನಿಟ್ ಉಚಿತ ವಿದ್ಯುತನ್ನು ಪೂರೈಸುತ್ತಿದೆ. ಇದರ ನಡುವೆಯೂ ಹಲವೆಡೆ ಅಲೆಮಾರಿ ಸಮುದಾಯದವರು ವಿದ್ಯುತ್ ಕಂಬಗಳ ತಂತಿಗಳಿಗೆ ಅಕ್ರಮವಾಗಿ ವೈರ್ ಅಳವಡಿಸುವ ಮೂಲಕ ವಿದ್ಯುತ್ ಬಳಸುತ್ತಿರುವುದು ಸರಿಯಲ್ಲ. ಇದು ಪ್ರಾಣ ಅಪಾಯಕಾರಿ. ಇದಕ್ಕೆ ಅವಕಾಶ ನೀಡಬಾರದು. ಉಚಿತ ಸವಲತ್ತುಗಳನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. .
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ ಮತ್ತಿತರರು ಇದ್ದರು.
*ಸಮಿತಿಯ ಬಗ್ಗೆ ಬೇಸರ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯು ಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದರ ಬಗ್ಗೆ ಕಡೆಗಣಿಸುವ ವಿಚಾರವಾಗಿ ಅಧ್ಯಕ್ಷರು ಬೇಸರಿಸಿದ್ದಾರೆ.
ಜಿಲ್ಲೆಯಲ್ಲಿ ಅಲೆಮಾರಿ ಜನಾಂಗದ 681 ಕುಟುಂಬಗಳಿಗೆ ವಸತಿ ಸೌಲಭ್ಯವೇ ಇಲ್ಲ. ಇದಕ್ಕೆ ಸರ್ಕಾರಿ ಜಮೀನನ್ನು ಗುರುತಿಸಿ ಇಲ್ಲವೇ ಖಾಸಗೀ ಜಮೀನು ಖರೀದಿಸಿ ನಿವೇಶನ ನೀಡಬೇಕು. ಇದರಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಿತಿಯ ಯಾವ ಸದಸ್ಯರು ಎಷ್ಟು ಬಾರಿ ಅಧಿಕಾರಿಗಳನ್ನು ಪ್ರಶ್ನಿಸಿದ್ದೀರಿ?, ಫಲಾನುಭವಿಗಳೊಂದಿಗೆ ಹೋರಾಟ ನಡೆಸಿದ್ದೀರಿ? ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.