

ಕೊಳ್ಳೇಗಾಲ: ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಬಜೆಟ್‌ನಲ್ಲಿ ಸುಮಾರು 7,700 ಕೋಟಿ ರೂ.ಗಳನ್ನು ಶಿಕ್ಷಣಕ್ಕೆ ಮೀಸಲಿಟ್ಟಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಆರ್.ಸಿ.ಎಂ ಶಾಲಾ ಆವರಣದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ 48,900 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದೆ. 1 ಕೋಟಿಗೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಸುಮಾರು 7,700 ಕೋಟಿ ರೂ.ಗಳನ್ನು ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಮೀಸಲಿಟ್ಟಿದೆ. ಒಟ್ಟು ಅಯವ್ಯಯದಲ್ಲಿ ಶೇ.15 ರಷ್ಟು ಶಿಕ್ಷಣಕ್ಕೆ ನೀಡಲಾಗಿದೆ. ಈ ಅಂಕಿ-ಅಂಶದಿಂದ ಸರ್ಕಾರ ಶಿಕ್ಷಣ ವ್ಯವಸ್ಥೆಗೆ ಎಷ್ಟು ಒತ್ತು ನೀಡುತ್ತದೆ ಎಂದು ತಿಳಿಯಲಿದೆ ಎಂದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಹೊರಹೊಮ್ಮಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಪಾಲ್ಗೊ ಳ್ಳಬೇಕು. ಇದ್ದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ತಾಲೂಕಿನ ಅಭಿಜಿತ್ ನಾಯಕ್ ಎಂಬ ವಿದ್ಯಾರ್ಥಿ ಡಿಸ್ಕಸ್ ಥ್ರೋ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿದ್ದಾನೆ. ಗಡಿ ಜಿಲ್ಲೆಗೆ ಅಂಟಿರುವ ಹಿಂದುಳಿದ ಜಿಲ್ಲೆ ಎಂಬ ಹೆಸರನ್ನು ಎಲ್ಲ ರಂಗದಲ್ಲೂ ಸಾಧನೆ ಮಾಡುವ ವಿದ್ಯಾರ್ಥಿಗಳು ಹೋಗಲಾಡಿಸಬೇಕೆಂದು ಹೇಳಿದರು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಮಾತನಾಡಿ, ಪ್ರತಿಭಾ ಕಾರಂಜಿ ಸುಂದರವಾಗಿ ಆಯೋಜನೆಗೊಂಡಿದೆ. 2002 ರಿಂದ ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ನಡೆಸುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳುವುದಕ್ಕೆ ಈ ಕಾರ್ಯಕ್ರಮ ಪೂರಕ ಎಂದರು.
ಈ ವೇಳೆ ಮಕ್ಕಳ ವಯೋಮಾನದ ಅನುಗುಣವಾಗಿ 35 ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀ ಮಲೆ ಮಹದೇಶ್ವರ, ಸೈನಿಕ, ಸೌರಮಂಡಲ, ಪ್ರಾಣಿ, ಪಕ್ಷಿಗಳು ಇನ್ನಿತರ ವೇಷಗಳನ್ನು ಮಕ್ಕಳು ಧರಿಸಿ ಕಣ್ಮನ ಸೆಳೆದರು.
ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ನಾಸೀರ್ ಶರೀಫ್, ಸುಮಾ ಸುಬ್ಬಣ್ಣ, ಡಿಡಿಪಿಐ ರಾಮಚಂದ್ರ ಅರಸ್, ಬಿಇಒ ಮಂಜುಳಾ, ಬಿ.ಆರ್.ಸಿ ಮಹದೇವಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಆರ್.ಸಿ.ಎಂ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಗೆಟ್ಸಿ ಹಾಗೂ ಮಕ್ಕಳು ಇತರರು ಇದ್ದರು.