

ಮಂಜುನಾಥ ಎಸ್. ಅಂಗಡಿ ಧಾರವಾಡ
ಉತ್ತಮ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು ಸರ್ಕಾರ ರಾಜ್ಯ ಮಟ್ಟದ `ಗಾಂಧಿ ಗ್ರಾಮ ಪುರಸ್ಕಾರ' ನೀಡುತ್ತಿತ್ತು. ಸಾಮಾಜಿಕ, ಶೈಕ್ಷಣಿಕ ಗಣತಿಯ ಗದ್ದಲದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಬಾರಿಯೂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕೊಕ್ ನೀಡಿದೆ.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲೆಂಬ ಸದುದ್ದೇಶ ಹೊಂದಲಾಗಿತ್ತು. 2013- 14ನೇ ಸಾಲಿನಿಂದ ಪ್ರತಿ ತಾಲೂಕಿಗೆ ಒಂದರ0ತೆ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ 5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಿ ಗೌರವಿಸಲಾಗುತ್ತಿತ್ತು. ಅ. 2ರಂದು ಬೆಂಗಳೂರಿನಲ್ಲಿ ಜರುಗುವ ಗಾಂಧಿ ಜಯಂತಿಯ0ದು ಸಿಎಂ ಹಾಗೂ ಇಲಾಖೆ ಸಚಿವರಿಂದ ಪ್ರಶಸ್ತಿ ಪ್ರದಾನ ನಡೆಯುತ್ತಿತ್ತು. ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನವಾಗುವುದು ಪಿಡಿಒ, ಗ್ರಾ.ಪಂ. ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗೆ ಇದು ಹೆಮ್ಮೆಯ ಸಂಗತಿಯಾಗಿತ್ತು. ಆದರೆ, ಸರ್ಕಾರ 2023- 24ನೇ ಸಾಲಿನಿಂದ ಗಾಂಧಿ ಗ್ರಾಮ ಪುರಸ್ಕಾರವನ್ನು ಸ್ಥಗಿತಗೊಳಿಸಿದೆ. ಈ ಬಾರಿಯಂತೂ ಪಿಡಿಒಗಳು ಗಣತಿಯಲ್ಲಿ ನಿರತರಾಗಿದ್ದು, ಪಂಚಾಯಿತಿಗಳು ರಾಜ್ಯಮಟ್ಟದ ಪುರಸ್ಕಾರದಿಂದ ವಂಚಿತವಾಗಿವೆ.
* ಮಾನದಂಡಗಳೇನು...?
ಪ0ಚಾಯಿತಿಗಳ ಆಡಳಿತ, ಅಭಿವೃದ್ಧಿ ಕಾರ್ಯಗಳ ಅನುಷ್ಠಾನ, ಹಣಕಾಸು ಯೋಜನೆಯ ವೆಚ್ಚ, ಅನುದಾನದ ಸದ್ಬಳಕೆ, ಗ್ರಾಮ ನೈರ್ಮಲ್ಯ, ವಾರ್ಡ್ ಮತ್ತು ಗ್ರಾಮ ಸಭೆಗಳ ಆಯೋಜನೆ, ಗ್ರಾಮ ಮಟ್ಟದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು, ನೀರು ಸರಬರಾಜು, ನಳಗಳಿಗೆ ಮೀಟರ್ ಅಳವಡಿಕೆ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಮತ್ತು ವಿಂಗಡಣೆ, ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಚಿಕ್ಕ ಮಕ್ಕಳಿಗೆ ಚುಚ್ಚುಮದ್ದು, ಆರೋಗ್ಯ ತಪಾಸಣೆ, ಗರ್ಭಿಣಿ, ಬಾಣಂತಿಯರ ಆರೋಗ್ಯ ಜಾಗೃತಿ, ಲಿಂಗ ಅನುಪಾತ, ಬಾಲ್ಯವಿವಾಹ ತಡೆ ಸೇರಿ ವಿವಿಧ ಮಾನದಂಡಗಳಿಗೆ ಅಂಕ ನೀಡಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತಿತ್ತು.
* ಆಯ್ಕೆ ಪ್ರಕ್ರಿಯೆ:
ಪಂಚಾಯಿತಿಗಳಿ0ದ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಇಲಾಖೆಯಿಂದ ಪ್ರಶ್ನಾವಳಿ ಕಳುಹಿಸಲಾಗುತ್ತಿತ್ತು. ಪುರಸ್ಕಾರ ಸ್ಪರ್ಧೆಯಲ್ಲಿ ಪಾಲ್ಗೊಂಡ ಪಂಚಾಯಿತಿಗಳು ಸಾಂಸ್ಥಿಕ ಮತ್ತು ಪ್ರಗತಿ ಸೂಚಕ ಪ್ರಶ್ನಾವಳಿಯನ್ನು ಭರಿಸಿ ಇಲಾಖೆಗೆ ಕಳುಹಿಸುತ್ತಿದ್ದವು. ಪ್ರತಿ ತಾಲೂಕಿನಲ್ಲಿ ಹೆಚ್ಚು ಅಂಕ ಪಡೆದ 5 ಪಂಚಾಯಿತಿಗಳು ಪುರಸ್ಕಾರಕ್ಕೆ ಅರ್ಹಗೊಂಡು ನಾಮನಿರ್ದೇಶನಗೊಳ್ಳುತ್ತಿದ್ದವು. ಬೇರೆ ತಾಲೂಕುಗಳ ಅಽಕಾರಿಗಳು ಭೇಟಿ ನೀಡಿ ದಾಖಲಾತಿಗಳು ಮತ್ತು ಭೌತಿಕ ಪ್ರಗತಿಯನ್ನು ಪರಿಶೀಲಿಸುತ್ತಿದ್ದರು. ಜಿ.ಪಂ. ಸಿಇಒ ಅಧ್ಯಕ್ಷತೆಯ ಜಿಲ್ಲಾ ಆಯ್ಕೆ ಸಮಿತಿ 5ರಲ್ಲಿ 1ನ್ನು ಆಯ್ಕೆ ಮಾಡಿ ಇಲಾಖೆಗೆ ಶಿಫಾರಸು ಮಾಡುತ್ತಿತ್ತು. ಗಾಂಧಿ ಜಯಂತಿಗೆ ವಾರ ಮೊದಲು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತಿತ್ತು. ಅರಮನೆ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ `ಗಾಂಧಿ ಗ್ರಾಮ ಪುರಸ್ಕಾರ' ಪ್ರದಾನ ಮಾಡಲಾಗುತ್ತಿತ್ತು.
ಸರ್ಕಾರ ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯಿತಿಗಳಿಗೆ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಆದರೆ, ಪಿಡಿಒಗಳ ಕಾರ್ಯವೈಖರಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಶಸ್ತಿಯನ್ನೇ ಮರೆತಿದೆ. ರಾಜ್ಯ ಮಟ್ಟದ ವಾರ್ಷಿಕ ಪುರಸ್ಕಾರ ನೀಡದ ಸರ್ಕಾರದ ಅನಾದರ ಪಿಡಿಒಗಳಿಗೆ ಬೇಸರ ತರಿಸಿದೆ.