

ಗುಳೇದಗುಡ್ಡ: ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಆದರೆ ಸಾಧಿಸುವ ಛಲ ಇದ್ದರೆ ಸಾಧನೆ ಶಿಖರ ತಲುಪಬಹುದು ಎಂಬ ಮಾತು ಬಾದಾಮಿ ತಾಲೂಕಿನ ಕೆಂದೂರು ಗ್ರಾಮದ ಸಿದ್ಧಾರೂಢ ಮಾಗುಂಡಪ್ಪ ಕೊಪ್ಪದರಿಗೆ ಸಲ್ಲುತ್ತದೆ.
ಸಿದ್ಧಾರೂಡ ಒಂದು ವರ್ಷದ ಮಗುವಾಗಿದ್ದಾಗ ಪೋಲಿಯೋದಿಂದಾಗಿ ಎಡಗಾಲು ಸ್ವಾಧೀನ ಕಳೆದುಕೊಂಡು ಅಂಗವೈಕಲ್ಯ ಉಂಟಾಯಿತು. ಆದರೆ ಅದು ಅವನ ಓದಿಗೆ ಅಡ್ಡಿ ಬರಲಿಲ್ಲ. ಬಡಿಗೆ ಹಿಡಿದುಕೊಂಡೆ ಬಾದಾಮಿಯಲ್ಲಿ ಎಸ್.ಎಸ್.ಎಲ್.ಸಿ ನಂತರ ಪಿಯುಸಿ ಹಾಗೂ ಬಿಎಸ್‌ಡ್ಯೂ ಪದವಿ ಪಡೆದ ಸಿದ್ದಾರೂಢ ಸಮಾಜ ಸೇವೆಯ ಜೊತೆಗೆ ಕ್ರೀಡಾ ಚಟವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಧನೆ ಮೆರದಿದ್ದಾನೆ.
ಹೈಸ್ಕೂಲ್ ವಿದ್ಯಾಭ್ಯಾಸದಿಂದಲೇ ವಿಕಲಚೇತನರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅವರು ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ದುಬೈ, ಶ್ರೀಲಂಕಾ, ನೇಪಾಳ ದೇಶಗಳಲ್ಲಿ ನಡೆದ ಅಂತರಾಷ್ಟ್ರೀಯ ಪ್ಯಾರಾ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶೆದ ಕೀರ್ತಿಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದಾರೆ.
2014ರಲ್ಲಿ ದುಬೈನಲ್ಲಿ ಸಿಕ್ಸ್ ಫಾಜಾ ಇಂಟರ್‌ನ್ಯಾಶನಲ್ ಅಥ್ಲೆಟಿಕ್ ಐಪಿಸಿ ಗ್ರಾಂಡ್ ಪ್ರಶಸ್ತಿ ಹಾಗೂ ಶಾರ್ಜಾದಲ್ಲಿ ನಡೆದ ಕ್ರೀಡಾಕೂಟದಲ್ಲಿಯೂ ಭಾಗವಹಿಸುವ ಮೂಲಕ ವಿದೇಶಿ ನೆಲದಲ್ಲೂ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. 2022ರ ಮೈಸೂರು ದಸರಾ ಉತ್ಸವದಲ್ಲಿ 80 ಕೆ.ಜಿ.ವಿಭಾಗ ಪಂಜ್ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಪದಕ ಪಡೆದಿದ್ದಾರೆ. ಕರ್ನಾಟಕ ಪ್ಯಾರಾ ಸಿಟ್ಟಿಂಗ್ ಕ್ರಿಕೆಟ್ ತಂಡದ ಕೋಚ್ ಆಗಿ ಸಧ್ಯ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ.
ಇವರ ಕ್ರೀಡಾ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. 2015 ರಲ್ಲಿ ಬೆಂಗಳೂರಿನ ಸಾಗರ ಸಂಗಮ ಸಾಂಸ್ಕೃತಿಕ ಅಕಾಡೆಮಿಯಿಂದ ಸಾಗರ ಸಂಗಮ ಸಮಾಜ ಸೇವಾ ರತ್ನ ಪ್ರಶಸ್ತಿ, ಬಾದಾಮಿಯಲ್ಲಿ ನಡೆದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ.
ಚುನಾವಣಾ ರಾಯಭಾರಿ: ಇತ್ತೀಚೆಗೆ ನಡೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ರಾಯಭಾರಿಯಾಗಿ ಸಿದ್ದಾರೂಢ ಕೊಪ್ಪದ ಅಯ್ಕೆಯಾಗಿ, ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಅವರ ಪಾತ್ರ ಮರೆಯುವಂತಿಲ್ಲ.
ವಿಕಲಚೇತನ ಸಾಧಕರಿಗೆ ನೀಡುವ ರಾಜ್ಯ ಪ್ರಶಸ್ತಿಗೆ ಸಿದ್ದಾರೂಢ ಕೊಪ್ಪದ ಆಯ್ಕೆಯಾಗದಿರುವುದು ದುರದಷ್ಟಕರ. ಈಗಲಾದರೂ ಸರ್ಕಾರ ಎಚ್ಚೆತ್ತು ಇಂತಹ ಸಾಧಕನಿಗೆ ರಾಜ್ಯಪ್ರಶಸ್ತಿ ನೀಡುವ ಮೂಲಕ ಪ್ರತಿಭೆಗೆ ಪ್ರೋತ್ಸಾಹಿಸುವು ಅಗತ್ಯವಾಗಿದೆ.
ಸಿದ್ದಾರೂಢ ಕೊಪ್ಪದ ಬಡತದಲ್ಲಿಯೂ ಕ್ರೀಡಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ವಿದೇಶದಲ್ಲಿ ಪ್ರತಿಭೆ ಮೆರೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಸರಕಾರ ಅವರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಸರ್ಕಾರಿ ಹುದ್ದೆ ನೀಡಬೇಕು. ರಾಜ್ಯಮಟ್ಟದ ಪ್ರಶಸ್ತಿ ನೀಡಬೇಕು. - ರವಿ ಗದಗಿನ, ವಿಕಲಚೇತನರ ಹೋರಾಟಗಾರ ವಿದೇದಲ್ಲಿ ಆಟವಾಡುವ ಮೂಲಕ ಸಾಧನೆ ಮಾಡ್ಯಾನ. ಆದ್ರ ಅವಂಗೊಂದು ನೌಕರೀನ ಇಲ್ರೀ. ಅವನ ಜೀವನಕ್ಕ ಆಧಾರಕ್ಕೆ ಸರ್ಕಾರ ಸೌಲಭ್ಯ ನೀಡಬೇಕು. - ಮುದಿಯಮ್ಮ ಕೊಪ್ಪದ, ಸಿದ್ದಾರೂಡನ ತಾಯಿ