

ವಿಜಯವಾಣಿ ಸುದ್ದಿಜಾಲ ಬೈಂದೂರು
ತಾಲೂಕಿನಲ್ಲಿ ಜಾನುವಾರು ಕೊರತೆಯಿಲ್ಲ. ಆದರೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಮಾನವ ಸಂಪನ್ಮೂಲ ಕೊರತೆ ನೀಗಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ. ರೈತರ, ಹೈನುಗಾರರ ನಿರೀಕ್ಷೆ ಹಾಗೂ ಚಿಂತನೆಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ತಕ್ಷಣ ಸರ್ಕಾರ ಸ್ಪಂದಿಸುವ ಮೂಲಕ ನೆರವಿಗೆ ಬರಬೇಕು ಎಂದು ದ.ಕ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಜಿಪಂ ಉಡುಪಿ, ಜಿಲ್ಲಾ ಪಶು ಪಾಲನಾ ಇಲಾಖೆ, ಖಂಬದಕೋಣೆ ರೈತ ಸೇವಾ ಸಹಕಾರಿ ಸಂಘ, ಬೈಂದೂರು ತಾಲೂಕು ಹಾಲು ಉತ್ಪಾದಕರ ಸಂಘಗಳು ಹಾಗೂ ಹೇರೂರು ಗ್ರಾಪಂ ಆಶ್ರಯದಲ್ಲಿ ಗುರುವಾರ ಮೇಕೋಡು (ಉಳ್ಳೂರು-11)ನಲ್ಲಿ ಹಾಲು ಕರೆಯುವ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಶು ಪಾಲನಾ ಉಪನಿರ್ದೇಶಕ ಡಾ.ಎಂ.ಸಿ.ರೆಡ್ಡಪ್ಪ ಮಾತನಾಡಿದರು. ಹೇರೂರು ಗ್ರಾಪಂ ಅಧ್ಯಕ್ಷೆ ಗೀತಾ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಉಪವ್ಯವಸ್ಥಾಪಕ (ಶೇಖರಣೆ) ಶಂಕರ ನಾಯ್ಕ, ಪಶುವೈದ್ಯರಾದ ಡಾ.ಶಂಕರ ಶೆಟ್ಟಿ, ಅರುಣ್ ವೈ.ಕೆ., ಒಕ್ಕೂಟ ವಿಸ್ತಾರಕ ರಾಜಾರಾಮ, ತಾಲೂಕು ಹಾಲು ಉತ್ಪಾದಕರ ವಿವಿಧ ಸಂಘಗಳ ಅಧ್ಯಕ್ಷರು ಇದ್ದರು. ಮೇಕೋಡು ಸಂಘದ ಸಿಇಒ ಕುಶಲ್‌ಕುಮಾರ್ ಸ್ವಾಗತಿಸಿದರು. ಪಶುಸಖಿ ಶಿಲ್ಪಾ ನಿರೂಪಿಸಿದರು. ಸತೀಶ ವಂದಿಸಿದರು.
ಹೇರೂರು ಗ್ರಾಪಂ ಅಧ್ಯಕ್ಷೆ ಗೀತಾ ಶೆಟ್ಟಿ ಗೋಪೂಜೆ ಮೂಲಕ ಹಾಲು ಕರೆಯುವ ಸ್ಪರ್ಧೆಗೆ ಚಾಲನೆ ನೀಡಿದರು. ಜೆರ್ಸಿ ವಿಭಾಗದಲ್ಲಿ ಓರಾ ರೆಬೆಲ್ಲೊ ನಾವುಂದ ಪ್ರಥಮ, ಉಮೇಶ ಪೂಜಾರಿ ಮೇಕೋಡು ದ್ವಿತೀಯ, ಭಾರತಿ ಆಚಾರ್ಯ ಅರೆಹೊಳೆ ತೃತೀಯ ಬಹುಮಾನ ಪಡೆದರು. ಎಚ್‌ಎಫ್ ವಿಭಾಗದಲ್ಲಿ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಪ್ರಥಮ, ರತ್ನಾ ದೇವಾಡಿಗ ಅರೆಹೊಳೆ ದ್ವಿತೀಯ, ರಾಮಕೃಷ್ಣ ಬಿಲ್ಲವ ಹೊಸ್ಕೋಟೆ ತೃತೀಯ ಬಹುಮಾನ ಹಾಗೂ ಇತರೇ ಒಂಭತ್ತು ಜನರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.