

ಆನೇಕಲ್: ಕರೊನಾ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ರೈತರ ಹೂತೋಟಗಳಿಗೆ ಭೇಟಿ ಹಾಗೂ ಸರ್ಜಾಪುರ ವ್ಯಾಪ್ತಿಯಲ್ಲಿ ಆಹಾರಧಾನ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಲಕ್ಷಾಂತರ ರೂ. ಬಂಡವಾಳ ಹೂಡಿ ಬೆಳೆ ಬೆಳೆದಿದ್ದಾರೆ. ಆದರೆ ಸರ್ಕಾರ ಹೆಕ್ಟೇರ್ ಹೂವು ಬೆಳೆಗೆ 25 ಸಾವಿರ ರೂ. ಪರಿಹಾರದ ಭರವಸೆ ನೀಡಿದೆ. ಇದರಿಂದ ರೈತರಿಗೆ ಸಂಕಷ್ಟವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಅಲ್ಲದೆ ತರಕಾರಿ ಹಾಗೂ ಹಣ್ಣು ಬೆಳೆಗಾರರ ಬಗ್ಗೆಯೂ ಕಣ್ಣು ತೆರೆಯಬೇಕು ಎಂದು ಒತ್ತಾಯಿಸಿದರು. ಹೂವು ಬೆಳೆಗಾರರಿಗೆ ಸಮರ್ಪಕ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ನಷ್ಟವಾಗಿರುವ ಬಗ್ಗೆ ಸರ್ಕಾರ ಸರಿಯಾಗಿ ಸರ್ವೇ ಮಾಡಬೇಕು. ಇಲ್ಲವಾದರೆ ರೈತರು ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ ಎಂದರು.
ಸಂಸದ ಡಿ.ಕೆ.ಸುರೇಶ್ ರೈತರ ತೋಟಗಳಲ್ಲಿ ತರಕಾರಿ ಖರೀದಿ ಅರಂಭಿಸಿ ನೆರವಿಗೆ ಮುಂದಾಗಿದ್ದಾರೆ. ಆದರೆ ಎಲ್ಲ ರೈತರಿಂದ ಅವರೊಬ್ಬರೆ ಖರೀದಿ ಮಾಡಲು ಸಾಧ್ಯವಿಲ್ಲ. ಸರ್ಕಾರವೇ ಹಣ್ಣು ತರಕಾರಿಯನ್ನು ನೇರವಾಗಿ ಖರೀದಿ ಮಾಡಿ ಮಾರುಕಟ್ಟೆಗೆ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಸರ್ಜಾಪುರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಕ್ಕರೆ ಪ್ಯಾಕೆಟ್ ಮಾಡುವ ವಿಚಾರದಲ್ಲಿ ಇದುವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ, ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಮೀನಮೇಷ ಏಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಸಂಸದ ಡಿ.ಕೆ .ಸುರೇಶ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಪ್ರತಿಪಕ್ಷದ ಸಚೇತಕ ಡಾ.ಅಜಯ್ ಸಿಂಗ್, ಬಮುಲ್ ಮಾಜಿ ಅಧ್ಯಕ್ಷ ಆರ್. ಕೆ . ರಮೇಶ್, ಮಾಜಿ ಸಂಸದ ಉಗ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸರ್ಜಾಪುರ ಶ್ರೀರಾಮ್, ಪ್ರಚಾರ ಸಮಿತಿ ಅಧ್ಯಕ್ಷ ದೊಡ್ಡಹಾಗಡೆ ಹರೀಸ್ ಗೌಡ, ಕಾಂಗ್ರೆಸ್ ಮುಖಂಡ ಸ್ವಾತೆಗೌಡ, ಪುರಸಭಾ ಸದಸ್ಯ ಎನ್.ಎಸ್. ಪದ್ಮನಾಭ, ನಾಗವೇಣಿ ಇದ್ದರು.
ಅಂತರ ಕಾಯ್ದುಕೊಳ್ಳದ ಜನ: ಮಾಜಿ ಸಿಎಂ ಆಗಮದ ಕಾರಣ ಆಹಾರಧಾನ್ಯ ಪಡೆಯಲು ಸರ್ಜಾಪುರ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಜನ ಜಮಾಯಿಸಿದ್ದರು. ಮಧ್ಯಾಹ್ನ 1 ಗಂಟೆಗೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಆಹಾರಧಾನ್ಯ ಪಡೆಯಲು ಜನ ಮುಗಿಬಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ವಿಲವಾಗಿದ್ದು ಕಂಡುಬಂತು.