ಗೃಹರಕ್ಷಕ ದಳಕ್ಕೆ ಸರ್ಕಾರದ ಸೌಲಭ್ಯ

17 Dwd 8
Published on

ಧಾರವಾಡ: ಪೊಲೀಸ್ ಇಲಾಖೆಯ ಕಾರ್ಯಗಳಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಉತ್ತಮವಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗೂ ಸರ್ಕಾರ ಹಾಗೂ ಇಲಾಖೆಯ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಪಿ. ಕೃಷ್ಣಕಾಂತ ಹೇಳಿದರು.

ನಗರದ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ 58ನೇ ಅಖಿಲ ಭಾರತ ಗೃಹರಕ್ಷಕ ದಳದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾಗ ಚುನಾವಣೆ ಹಾಗೂ ಇತರ ತುರ್ತು ಸಂದರ್ಭದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗುತ್ತದೆ. ವಹಿಸಿದ ಕೆಲಸವನ್ನು ಅವರು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಮಾಡುತ್ತಾರೆ. ಸಮವಸ್ತ್ರ ಧರಿಸಿ ಸಮಾಜಕ್ಕೆ ಉತ್ತಮ ಸೇವೆ ನೀಡುತ್ತ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿದ್ದಾರೆ ಎಂದರು.

ನಿವೃತ್ತ ಡೆಪ್ಯೂಟಿ ಕಮಾಂಡರ್ ಬಿ.ಆರ್. ಕಂದಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಸತೀಶಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪೌರರಕ್ಷಣಾ ಚೀಫ್ ವಾರ್ಡನ್ ಸತೀಶ ಇರಕಲ್, ಲಯನ್ಸ್ ಕ್ಲಬ್ ಗ್ಯಾಲಾಕ್ಸಿ ಅಧ್ಯಕ್ಷ ಡಾ. ಎಂ.ಎ. ಮುಮ್ಮಿಗಟ್ಟಿ, ಡಿವೈಎಸ್ಪಿ ಜಿ.ಸಿ. ಶಿವಾನಂದ, ಜಿಲ್ಲಾ ಗೃಹರಕ್ಷಕ ದಳದ ಸಹಾಯಕ ಆಡಳಿತಾಕಾರಿ ಸತೀಶ ನಾಯಕ, ಸಹಾಯಕ ಬೋಧಕರಾದ ಟಿ.ಎ. ಬಾದಾಮಿ, ಆರ್.ಎಚ್. ಶಾಂತಗೇರಿ, ಘಟಕಾಧಿಕಾರಿ ಅಶೋಕ ಬಿ. ಗೌಡರ, ಸ್ಟಾಫ್ ಆಫೀಸರ್ ಡಾ. ಪ್ರಕಾಶ ಪವಾಡಶೆಟ್ಟಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ಲಟೂನ್ ಕಮಾಂಡರ್ ವಾದಿರಾಜ ದೇಶಪಾಂಡೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net