

ಸದೇಶ್ ಕಾರ್ಮಾಡ್ ಮೈಸೂರು
ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಮಾಡಲು ರಾಜ್ಯ ಸರ್ಕಾರ ಒಲವು ತೋರಿದ್ದು, ಸದ್ಯದಲ್ಲಿಯೇ ಈ ಪ್ರಕ್ರಿಯೆಗೆ ಹಸಿರು ನಿಶಾನೆ ದೊರೆಯುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಮುಂಚೂಣಿಯಲ್ಲಿರುವ ಸಾಂಸ್ಕೃತಿಕ ನಗರಿಯು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ (ಗ್ರೇಟರ್ ಮೈಸೂರು) ಆಗಿ ರೂಪುಗೊಳ್ಳಬೇಕೆಂಬ ಮೈಸೂರಿಗರ ಒಂದು ದಶಕದ ಕನಸು. ಈ ಕನಸನ್ನು ಸಾಕಾರೊಗಳಿಸಲು ನಾಡಹಬ್ಬ ದಸರಾ ಉತ್ಸವ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚರ್ಚೆ ನಡೆಸಿದ್ದರು.
ಈ ಚರ್ಚೆಯ ಮುಂದುವರೆದ ಭಾಗವಾಗಿ ರಾಜ್ಯ ಸರ್ಕಾರದ ನಿರ್ದೇಶನ ಪ್ರಕಾರ ನಗರ ಪಾಲಿಕೆ ಅಧಿಕಾರಿಗಳು ಸೋಮವಾರ ಸಭೆ ನಡೆಸಿ ಗ್ರೇಟರ್ ಮೈಸೂರಿನ ಕುರಿತು ವರದಿ ಸಿದ್ಧಪಡಿಸಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇ-ಖಾತೆ ಕುರಿತು ಆಯೋಜಿಸಿದ್ದ ವಿಡಿಯೋ ಸಂವಾದ ಹಿನ್ನೆಲೆಯಲ್ಲಿ ಈ ಸಭೆಯನ್ನು ರದ್ದು ಪಡಿಸಲಾಗಿದೆ. ಸದ್ಯದಲ್ಲಿಯೇ ಗ್ರೇಟರ್ ಮೈಸೂರು ರಚನೆ ಕುರಿತು ಸಭೆ ನಡೆಸಿ ಸರ್ಕಾರ ವರದಿ ಪಡೆಯಲಿದೆ. ಈ ಅವರದಿಯ ಆಧಾರದ ಮೇಲೆ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ.
ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ‘ಗ್ರೇಟರ್ ಮೈಸೂರು’ ರಚನೆಯಾಗಬೇಕು ಎಂಬ ಒತ್ತಾಯ ಕೇಳಿ ಬಂತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ. ರಾಮದಾಸ್ ಗ್ರೇಟರ್ ಮೈಸೂರಿಗೆ ಯೋಜನೆ ಸಿದ್ಧಪಡಿಸಿದ್ದರು. ಆದರೆ ಕಾರಣಾಂತರಗಳಿಂದ ‘ಗ್ರೇಟರ್ ಮೈಸೂರು’ ಕನಸು ನನಸಾಗಲಿಲ್ಲ.
ನಂತರದ ಹಲವು ವರ್ಷಗಳಲ್ಲಿ ‘ಗ್ರೇಟರ್ ಮೈಸೂರು’ ವಿಷಯ ಕೇವಲ ಬಜೆಟ್ ಸಂದರ್ಭ ಮಾತ್ರ ಚರ್ಚೆಗೆ ಸೀಮಿತವಾಯಿತು. ಆದರೆ, ಕಳೆದ ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಮೈಸೂರಿಗರ ‘ಗ್ರೇಟರ್ ಮೈಸೂರು’ ಕನಸಿಗೆ ಮತ್ತೆ ರೆಕ್ಕೆ ಕಟ್ಟಲು ಪ್ರಾರಂಭಿಸಿದರು. ಈ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ನಡೆಸಿದರು. ಆದರೆ, ಕೋವಿಡ್, ಮೇಯರ್ ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ‘ಗ್ರೇಟರ್ ಮೈಸೂರು’ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಶಾಸಕರು, ಸಂಸದರ ಸಭೆ ನಡೆಸಿ ಗ್ರೇಟರ್ ಮೈಸೂರು ಕುರಿತು ಅಭಿಪ್ರಾಯ ಪಡೆಯಲಾಯಿತು. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಗ್ರೇಟರ್ ಮೈಸೂರು ಕುರಿತು ಒಲವು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಆದರೆ, ಈ ಬಗ್ಗೆ ನಗರ ಪಾಲಿಕೆ ಕೌನ್ಸಿಲ್ ಒಪ್ಪಿಗೆ ಪಡೆಯಲು ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ಆ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿ ನಗರ ಪಾಲಿಕೆ ಸದಸ್ಯರು ಪರಸ್ಪರ ದೋಷಾರೋಪಣೆಯಲ್ಲಿ ಮುಳುಗಿದ್ದರು. ಆ ನಂತರ ವಿಧಾನಸಭೆ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಇದೀಗ ಮತ್ತೊಮ್ಮೆ ಗ್ರೇಟರ್ ಮೈಸೂರು ರಚನೆಯ ವಿಚಾರ ಪ್ರಸ್ತಾಪಗೊಂಡಿದೆ.
ಅಭಿವೃದ್ಧಿಗೆ ಹೊಸ ವೇಗ: ಗ್ರೇಟರ್ ಮೈಸೂರು ರಚನೆಯಾದರೆ ನಗರದ ಅಭಿವೃದ್ಧಿಗೆ ಹೊಸ ವೇಗ ದೊರೆಯುವುದು ನಿಶ್ಚಿತ. ನಗರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಮೂಲಸೌಲಭ್ಯಗಳು ಶೀಘ್ರದಲ್ಲಿಯೇ ದೊರೆತು ನಗರ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ನಗರ ಹಾಗೂ ನಗರದ ಹೊರ ವಲಯದ ಜನರ ದಾಹ ನೀಗಿಸಲು ಹಳೇ ಉಂಡವಾಡಿ ಕುಡಿಯುವ ನೀರಿನ ಯೋಜನೆ, ಕಬಿನಿ ಎರಡನೇ ಹಂತದ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರೇಟರ್ ಮೈಸೂರು ವ್ಯಾಪ್ತಿಗೆ ಬರುವ ಪ್ರದೇಶ ಗಳಲ್ಲಿ ಕುಡಿಯುವ ನೀರು ಹಾಗೂ ಸೇರಿದಂತೆ ಎಲ್ಲ ಮೂಲಸೌಲಭ್ಯಗಳು ವೇಗವಾಗಿ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಎಲ್ಲ ಸೌಲಭ್ಯಗಳು ದೊರೆತರೆ ಸಹಜವಾಗಿಯೇ ಹೊಸ ಬಡಾವಣೆಗಳಲ್ಲಿ ಜನರು ಮನೆಗಳ ನಿರ್ಮಾಣಕ್ಕೆ ಉತ್ಸಾಹ ತೋರುತ್ತಾರೆ. ಇದರಿಂದ ಪಾಲಿಕೆಯ ಆದಾಯವೂ ವೃದ್ಧಿಯಾಗುತ್ತದೆ.
ಯಾವೆಲ್ಲ ಪ್ರದೇಶಗಳು ಸೇರ್ಪಡೆ?: ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಸೇರಿಸಿ ಗ್ರೇಟರ್ ಮೈಸೂರು ರಚಿಸಲು ಉದ್ದೇಶಿಸಲಾಗಿದೆ. ಗ್ರೇಟರ್ ಮೈಸೂರು ರಚನೆಯಾದರೆ ಹೂಟಗಳ್ಳಿ ನಗರಸಭೆ, ಬೋಗಾದಿ, ಕಡಕೊಳ, ಶ್ರೀರಾಂಪುರ ಮತ್ತು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಹಾಲನಹಳ್ಳಿ, ಚಾಮುಂಡಿಬೆಟ್ಟ, ಇಲವಾಲ ಮತ್ತು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿಗಳು ಒಳಪಡಲಿವೆ. ಈ ಎಲ್ಲ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಯ ಒಪ್ಪಿಗೆ ಅವಶ್ಯಕತೆ ಇದೆ. ಜತೆಗೆ ನಗರ ಪಾಲಿಕೆಯ ಒಪ್ಪಿಗೆಯೂ ದೊರೆಯಬೇಕಾಗಿದೆ.
ವೃದ್ಧಿಸಲಿದೆ ನಗರದ ಆದಾಯ: ಗ್ರೇಟರ್ ಮೈಸೂರು ಕಾರ್ಯರೂಪಕ್ಕೆ ಬಂದರೆ ಪಾಲಿಕೆಗೆ ಹೆಚ್ಚುವರಿಯಾಗಿ 1.51 ಲಕ್ಷ ಜನಸಂಖ್ಯೆ ಸೇರ್ಪಡೆಯಾಗಲಿದೆ. ಅಲ್ಲದೆ ಹೆಚ್ಚುವರಿಯಾಗಿ 25.81 ಕೋಟಿ ರೂ. ಆದಾಯ ಹರಿದು ಬರುವ ನಿರೀಕ್ಷೆ ಇದೆ. ನಗರದ ಹೊರ ವಲಯದಲ್ಲಿರುವ ಪಟ್ಟಣ ಪಂಚಾ ಯಿತಿ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ದರ ಕಡಿಮೆ ಇದ್ದು, ನಗರ ಪಾಲಿಕೆ ವ್ಯಾಪ್ತಿಗೆ ಬಂದರೆ ತೆರಿಗೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಪ್ರಸ್ತುತ ಸಂಗ್ರಹವಾಗುತ್ತಿರುವ ತೆರಿಗೆ ಹಣಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯ ನಗರ ಪಾಲಿಕೆಗೆ ದೊರೆಯುವ ನಿರೀಕ್ಷೆ ಇದೆ. ಗ್ರೇಟರ್ ಮೈಸೂರು ರಚನೆಯಾದರೆ ಜನಸಂಖ್ಯೆಗೆ ಪೂರಕವಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ. ಅದರ ಜತೆಗೆ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ, ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ.