

ಮೈಸೂರು: ಇಂದಿನ ಆಧುನಿಕ ದಿನಗಳಲ್ಲಿ ರಾಸಾಯನಿಕ, ಕ್ರಿಮಿನಾಶಕ ಮುಕ್ತ ಆಹಾರ ಪದಾರ್ಥಗಳನ್ನು ಬೆಳೆಯಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.
ಸಹಜ ಸಮೃದ್ಧಿ ವತಿಯಿಂದ ಕೃಷಿ ಇಲಾಖೆ ಸಹಯೋಗದಲ್ಲಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ‘ಮೈಸೂರು ಸಿರಿಧಾನ್ಯ ಸಂಭ್ರಮ’ಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಹಾಗೂ ಕ್ರಿಮಿನಾಶಕವನ್ನು ಹೆಚ್ಚು ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಸರ್ಕಾರ ರಾಸಾಯನಿಕ, ಕ್ರಿಮಿನಾಶಕ ಮುಕ್ತವಾಗಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ಅದಕ್ಕಾಗಿ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಸಹಾಯಧನವನ್ನೂ ನೀಡುತ್ತಿದೆ ಎಂದು ಹೇಳಿದರು.
ರೈತರು ಇದರ ಪ್ರಯೋಜನ ಪಡೆದುಕೊಂಡು ನಮ್ಮ ಹಿಂದಿನ ಪದ್ಧತಿಯಂತೆ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡಬೇಕು. ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳನ್ನು ಜನರಿಗೆ ನೀಡಬೇಕು. ಇದರಿಂದ ಮುಂದಿನ ಪೀಳಿಗೆ ಆರೋಗ್ಯದಿಂದ ಇರಲು ಸಹಕಾರಿಯಾಗುತ್ತದೆ ಎಂದರು.
ಸಿರಿಧಾನ್ಯ ಮಳೆ ಆಶ್ರಿತ ಪ್ರದೇಶದಲ್ಲೂ ಬೆಳೆಯಬಹುದಾದ ಬೆಳೆಯಾಗಿದ್ದು, ನಮ್ಮ ಹಿರಿಯರು ಸಿರಿಧಾನ್ಯ ಆಹಾರ ಬಳಸುವ ಮೂಲಕ ಗಟ್ಟಿಮುಟ್ಟಾಗಿದ್ದರು. ಆದರೆ ಆಧುನಿಕ ಪದ್ಧತಿ ಬಂದ ಬಳಿಕ ಸಿರಿಧಾನ್ಯ ಕಡಿಮೆಯಾಗಿತ್ತು. ಈಗ ಮರಳಿ ಸಿರಿಧಾನ್ಯದತ್ತ ಜನರು ಒಲವು ತೋರುತ್ತಿದ್ದು, ಹೆಚ್ಚು ಜನರು ಬೆಳೆಯಲು ಆರಂಭಿಸಿದ್ದಾರೆ. ಇದಕ್ಕೆ ಸೂಕ್ತ ಮಾರುಕಟ್ಟೆ, ಸಂಸ್ಕರಣಾ ಘಟಕವನ್ನು ನಿರ್ಮಿಸಿಕೊಡಬೇಕಿದೆ ಎಂದು ತಿಳಿಸಿದರು.
ರಾಸಾಯನಿಕ, ಕ್ರಿಮಿನಾಶಕ ಹೆಚ್ಚು ಬಳಕೆಯಿಂದ ಕೃಷಿ ದುಬಾರಿ ಎನ್ನುವಂತಾಗಿದೆ. ಹಾಗಾಗಿ, ಕೃಷಿ ವಲಯವನ್ನು ಕೈಗಾರಿಕೆಗಳ ರೀತಿ ಪರಿಗಣಿಸಬೇಕಿದೆ. ಅದಕ್ಕೆ ಅನುಗುಣವಾಗಿ ರೈತರು ಪರಸ್ಪರ ಸಹಕಾರ, ಸಂಘಟನೆ ಮೂಲಕ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
‘ಪೌಷ್ಟಿಕ ಪಾಕ’ ಪುಸ್ತಕ ಬಿಡುಗಡೆ ಮಾಡಿದ ರಂಗಕಲಾವಿದೆ ಅಕ್ಷತಾ ಪಾಂಡವಪುರ ಮಾತನಾಡಿ, ಯುವಪೀಳಿಗೆ ಕೃಷಿಯಿಂದ ವಿಮುಖವಾಗುತ್ತಿದ್ದು, ನಗರದತ್ತ ಹೆಚ್ಚು ವಲಸೆ ಹೋಗುತ್ತಿದ್ದಾರೆ. ಕೃಷಿ ಲಾಭದಾಯಕ ಎನ್ನುವಂತೆ ತೋರಿಸಲು ಯುವ ಜನಾಂಗ ಮಾದರಿಯಾಗಬೇಕು. ಹೆಚ್ಚು ಪೌಷ್ಟಿಕಾಂಶಯುಕ್ತ ಸಿರಿಧಾನ್ಯವನ್ನು ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಆಂಧ್ರಪ್ರದೇಶದ ಆರ್ಥ್ 360 ಸಂಸ್ಥಾಪಕ ಎಂ.ದಿನೇಶ್ ಮಾತನಾಡಿ, ಸ್ವಾತಂತ್ರೃ ಪೂರ್ವದಲ್ಲಿ ಸಾವಯವ ಜತೆಗೆ ಸಿರಿಧಾನ್ಯವನ್ನು ಹೆಚ್ಚು ಬೆಳೆಯಲಾಗುತ್ತಿತ್ತು. ಆಧುನಿಕ ಕೃಷಿ ಪದ್ಧತಿ ಬಂದ ಬಳಿಕ ಕಣ್ಮರೆಯಾಗಿದ್ದ ಸಿರಿಧಾನ್ಯಕ್ಕೆ ಈಗ ಜನರು ಮರು ಜನ್ಮ ನೀಡಿ ಬಳಸಲು ಮುಂದಾಗಿದ್ದಾರೆ. ಈ ಮೂಲಕ ಪೌಷ್ಟಿಕಾಂಶಯುಕ್ತ ಆಹಾರ ಪಡೆಯಲು ಬಯಸಿದ್ದಾರೆ. ಸಹಜ ಸಮೃದ್ಧಿಯಂತಹ ಸ್ವಯಂ ಸೇವಾ ಸಂಸ್ಥೆಗಳು ಸಿರಿಧಾನ್ಯ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಸಹಜ ಸಮೃದ್ಧಿ ಸಂಸ್ಥೆಯ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಮಾತನಾಡಿ, ಸಿರಿಧಾನ್ಯದ ಮಹತ್ವವನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎನ್ನುವ ಘೋಷಣೆಯನ್ನು ಮಾಡಲಾಗಿದೆ. ವರ್ಷಾಷರಣೆ ಮುಗಿದರೂ ಸಿರಿಧಾನ್ಯ ಸಂಭ್ರಮ ನಿರಂತರವಾಗಿ ಇರಬೇಕು. ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್ ಸೇರಿದಂತೆ ಇನಿತರ ರಾಜ್ಯಗಳು ಸಿರಿಧಾನ್ಯ ಮಿಷನ್ ಸ್ಥಾಪಿಸಿ, ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಲು ಮುಂದಾಗಿವೆ. ಅದೇ ಮಾದರಿ ಕರ್ನಾಟಕದಲ್ಲಿಯೂ ಸಿರಿಧಾನ್ಯ ಮಿಷನ್ ಸ್ಥಾಪಿಸಿ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ. ಎಸ್.ಚಂದ್ರಶೇಖರ್, ಸಿರಿಧಾನ್ಯ ಸಂರಕ್ಷಕರಾದ ಬೆಳಗಾವಿಯ ಪ್ರವೀಣ್ ಹೆಬ್ಬಳ್ಳಿ, ಧಾರವಾಡದ ಸಾವಿತ್ರಿ ಕೊಡ್ಲಿ, ಹಾವೇರಿಯ ವೀರಭದ್ರಯ್ಯ ಹಿರೇಮಠ ಇತರರು ಭಾಗವಹಿಸಿದ್ದರು.