

ಚಿಕ್ಕಮಗಳೂರು: 7ನೇ ವೇತನ ಆಯೋಗದ ವರದಿ ಅನುಷ್ಠಾನ, ಎನ್‌ಪಿಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 3 ಹಂತದಲ್ಲಿ ಹೋರಾಟ ಕೈಗೊಳ್ಳಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಮಾನ ಮಾಡಿದೆ.
ಚಿಕ್ಕಮಗಳೂರಿನ ಪೈ ಸಭಾಂಗಣದಲ್ಲಿ ಭಾನುವಾರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್.ಷಡಾಕ್ಷರಿ, 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಬೇಕು, ಎನ್ ಪಿ ಎಸ್ ರದ್ದುಪಡಿಸಿ ಓ ಪಿ ಎಸ್ ಜಾರಿ ಮಾಡಬೇಕು ಹಾಗೂ ಸರ್ಕಾರಿ ನೌಕರರ ಕುಟುಂಬಕ್ಕೆ ಉಚಿತ ಆರೋಗ್ಯ ಯೋಜನೆ ನೀಡಬೇಕು ಎಂದು ಒತ್ತಾಯಿಸಿ 3 ಹಂತದಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಜು. 8ರಿಂದ 14ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮನವಿ ಸಲ್ಲಿಸಲಾಗುವುದು. ಆಗಲೂ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಜು. 15ರ ಬಳಿಕ ಬೆಂಗಳೂರಿನಲ್ಲಿ ಮತ್ತೆ ಸಂಘದ ರಾಜ್ಯಕಾರ್ಯಕಾರಿಣಿ ಸಭೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಆದರೂ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಿಂದಲೇ ಸರ್ಕಾರಿ ನೌಕರರು ಕೆಲಸಕ್ಕೆ ಗೈರಾಗಿ ಅನಿರ್ಧಿಷ್ಟಾವಧಿ ಹೋರಾಟ ನಡೆಸಲು ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಿಲ್ಲ. ಜೊತೆಗೆ ಧಿಕ್ಕಾರವನ್ನು ಕೂಗುವುದಿಲ್ಲ. ಬದಲಿಗೆ ಪ್ರತಿಯೊಬ್ಬ ಸರ್ಕಾರಿ ನೌಕರರು ನಮ್ಮ ಬೇಡಿಕೆ ಈಡೇರುವವರೆಗೆ ಕೆಲಸಕ್ಕೆ ಗೈರಾಗಲಿದ್ದಾರೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
7ನೇ ವೇತನ ಆಯೋಗದ ವರದಿ ನೀಡಿ 19 ತಿಂಗಳುಗಳಾದರೂ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಿಲ್ಲ. ನೌಕರರಿಗೆ ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರಿಸುವುದು, ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು ಸೇರಿದಂತೆ ಯಾವುದೇ ಬೇಡಿಕೆಗಳಿಗೂ ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಏಳನೇ ವೇತನ ಆಯೋಗದ ವರದಿಯ ಶಿಫಾರಸ್ಸನ್ನು ಆದಷ್ಟು ಶೀಘ್ರ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ನಂತರ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಜಾರಿ ಮಾಡುವುದಾಗಿ ಹೇಳಿದ್ದರು. ಆದರೆ ಆ ಭರವಸೆಯೆಲ್ಲವೂ ಎರಡು ವರ್ಷವಾದರೂ ಈಡೇರದೆ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸಂಘದ ಪದಾಧಿಕಾರಿಗಳು ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ. ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮನಸ್ಸಿಲ್ಲ ಎಂದು ದೂರಿದರು.
ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಇಂದು ನಮಗೆ ಹೋರಾಟ ಅನಿವಾರ್ಯವಾಗಿದೆ. ರಾಜ್ಯದ ಎಲ್ಲಾ ಆರು ಲಕ್ಷ ಸರ್ಕಾರಿ ನೌಕರರೂ ಮುಷ್ಕರಕ್ಕೆ ಇಳಿಯಬೇಕು. ಸಸ್ಪೆಂಡ್, ಡಿಸ್ಮಿಸ್, ಎಸ್ಮಾ ಜಾರಿ ಸೇರಿದಂತೆ ಯಾವುದೇ ಒತ್ತಡ, ಯಾವುದೇ ಬೆದರಿಕೆಗೂ ಬೆದರದೇ ಬಗ್ಗದೇ ಕರ್ತವ್ಯವನ್ನು ಬಹಿಷ್ಕರಿಸಿ ಚಳವಳಿ ನಡೆಸಬೇಕು ಎಂದು ಕರೆ ನೀಡಿದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಸರ್ಕಾರಿ ನೌಕರರಿಗೂ ಹೆಂಡತಿ, ಮಕ್ಕಳು, ಸಂಸಾರವಿರುವುದನ್ನು ರಾಜ್ಯ ಸರ್ಕಾರ ಮನಗಾಣಬೇಕು. ನಾಡಿನ ಮತ್ತು ಜನರ ಏಳಿಗೆಗಾಗಿ ಆಹರ್ನಿಷಿ ದುಡಿಯುತ್ತಿರುವ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಿವಿ ಮಾತು ಹೇಳಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ವೆಂಕಟೇಶಯ್ಯ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ್, ಹಿರಿಯ ಉಪಾಧ್ಯಕ್ಷರಾದ ಎಂ.ವಿ. ರುದ್ರಪ್ಪ, ಎಸ್.ಬಸವರಾಜ್, ಖಜಾಂಚಿ, ಡಾ.ಸಿದ್ದರಾಮಣ್ಣ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ದೇವೇಂದ್ರ ಉಪಸ್ಥಿತರಿದ್ದರು.