ಫೆ.7ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ಧರಣಿ: ಸರ್ಕಾರಿ ನೌಕರರ ಒಕ್ಕೂಟದ ಸದಸ್ಯೆ ರೇಣುಕಾ ಮಾಹಿತಿ

Government Employees Union Protest mandya
Published on

ಮಂಡ್ಯ: ಶೇ.40ರಷ್ಟು ಹೆಚ್ಚಳದೊಂದಿಗೆ 7ನೇ ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ರಾಜ್ಯ ಮಟ್ಟದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಸಂಚಾಲನಾ ಸಮಿತಿಯ ಸದಸ್ಯೆರೇಣುಕಾ ತಿಳಿಸಿದರು.

ಎಲ್ಲ ನೌಕರರಿಗೂ ಪಿಎಫ್‌ಡಿಆರ್‌ಡಿಎ ಕಾಯ್ದೆ/ಎನ್‌ಪಿಎಸ್ ಪದ್ಧತಿ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ (ಒಪಿಎಸ್) ಮರು ಸ್ಥಾಪಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕೆಂದು ಒತ್ತಾಯಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗುತ್ತಿಗೆ/ಹೊರಗುತ್ತಿಗೆ ಅರೆಕಾಲಿಕ ನೇಮಕಾತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಈ ವೇತನವನ್ನು ಸರ್ಕಾರದಿಂದ ನೇರವಾಗಿ ಖಾತೆಗೆ ಜಮೆ ಮಾಡುವುದು. ಇನ್ನು ಮುಂದೆ ಗುತ್ತಿಗೆ/ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಟ್ಟು ಖಾಯಂ ನೇಮಕಾತಿ ಮಾಡಿಕೊಳ್ಳುವುದು. ಕೋವಿಡ್ ನೆಪದಲ್ಲಿ ತಡೆಹಿಡಿಯಲಾಗಿರುವ 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಶೀಘ್ರ ಪರಿಷ್ಕರಣೆ ಮಾಡಿ, ಜೇಷ್ಠತಾ ಪಟ್ಟಿ ಸಿದ್ಧಪಡಿಸುವುದರ ಜತೆಗೆ ನಿಯಮಾನುಸಾರ ಪದೋನ್ನತಿ ನೀಡಬೇಕು. ಆಡಳಿತ ಸುಧಾರಣೆಗಳ ನೆಪದಲ್ಲಿ ಇಲಾಖೆಗಳ ವಿಲೀನ, ನೌಕರರ ಸಂಖ್ಯೆ ಕಡಿತ, ಸಾರ್ವಜನಿಕ ಉದ್ದಿಮೆಗಳ/ಸರ್ಕಾರದ ಯೋಜನೆಗಳ ಖಾಸಗೀಕರಣ, ಹೊರಗುತ್ತಿಗೆ ನೇಮಕಾತಿ ಪ್ರಸ್ತಾವನೆಗಳನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು.

ಒಕ್ಕೂಟದ ಪದಾಧಿಕಾರಿಗಳಾದ ಟಿ.ಎಸ್.ಸುನಿಲ್‌ಕುಮಾರ್, ಜಿ.ವಿ.ಶಿವಕುಮಾರ್, ಸಿದ್ದರಾಜು, ಮಹಾದೇವ, ಟಿ.ಎ.ಪ್ರಶಾಂತಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net