ಸರ್ಕಾರಿ ನೌಕರರ ಮುಷ್ಕರದಿಂದ ಸೇವೆ ವ್ಯತ್ಯಯ

1BGV_ravig4.jpg
Published on

ಬೆಳಗಾವಿ  : ಹಳೆಯ ಪಿಂಚಣಿ ಯೋಜನೆ ಹಾಗೂ ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಜಿಲ್ಲೆಯಿಡೀ ಗುರುವಾರ ನಡೆಸಿದ ಮುಷ್ಕರದ ಪರಿಣಾಮ, ಜಿಲ್ಲೆಯ ಸರ್ಕಾರಿ ಕಚೇರಿಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು.
ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಾ.1ರಂದು ನಿಗದಿಯಾಗಿದ್ದ ಪಿಯು ಪ್ರಥಮ ವರ್ಷದ ಪರೀಕ್ಷೆ ಹಾಗೂ ಎಸ್‌ಎಸ್‌ಎಲ್ಸಿಯ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಮುಷ್ಕರದಿಂದಾಗಿ ಮುಂದೂಡಲಾಗಿತ್ತು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳ ಬಾಗಿಲು ಎಂದಿನಂತೆ ತೆರೆದಿದ್ದವು. ವಿವಿಧ ಕೆಲಸಗಳ ನಿಮಿತ್ತ ಜಿಲ್ಲೆಯ ವಿವಿಧೆಡೆಯಿಂದ ಜನರು ಬಂದಿದ್ದರು. ಆದರೆ, ನೌಕರರು ಸೇವೆಗೆ ಹಾಜರಾಗದ್ದರಿಂದ ಪರದಾಡುವಂತಾಗಿತ್ತು. ಡಿಡಿಪಿಐ ಕಚೇರಿ, ಬಿಇಒ ಕಚೇರಿ, ತಾಪಂ, ಜಿಪಂ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿ ಬೆರೆಳೆಣಿಕೆಯಷ್ಟೇ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಕರ್ತವ್ಯಕ್ಕೆ ಹಾಜರಾಗಿದ್ದ ಬಹುತೇಕ ಅಧಿಕಾರಿಗಳು ಉನ್ನತ ಅಧಿಕಾರಿಗಳ ವಿಡಿಯೋ ಕಾನ್ಪರನ್ಸ್‌ನಲ್ಲಿ ಪಾಲ್ಗೊಂಡಿದ್ದರಿಂದ ಕಚೇರಿ ತೆರೆದಿದ್ದರೂ ಇಲಾಖೆಯ ಸೇವೆಯಲ್ಲಿ ವ್ಯತ್ಯಯವಾಯಿತು.
ಉಪನೋಂದಣಾಧಿಕಾರಿ ಜಕಚೇರಿಯ ಮುಂದೆ ಸಾಲು ಸಾಲು ವಾಹನಗಳು ಬಂದು ನಿಂತಿದ್ದವು. ನೋಂದಣಿಗೆ ಜನ ಮುಗಿಬೀಳುತ್ತಿದ್ದರಾದರೂ, ಮುಷ್ಕರದ ಪರಿಣಾಮ ಯಾವುದೇ ನೋಂಧಣಿಯೂ ಸಾಧ್ಯವಾಗಲಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಯಿತು.
ಸರ್ಕಾರಿ ಶಾಲೆ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರೂ ಸೇವೆಗೆ ಗೈರಾಗಿದ್ದರಿಂದ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ವಾಪಸ್ ಮನೆಗೆ ಹೋದರು. ಮುಷ್ಕರದ ನಡುವೆಯೂ ಎಂದಿನಂತೆ ನಿರತವಾಗಿದ್ದ ವೈದ್ಯಕೀಯ ಸೇವೆಯ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಹೇಶ ಕೋಣಿ ಅವರು, ತುರ್ತು ಸೇವೆಯಾಗಿದ್ದರಿಂದ ಬಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ನೌಕರರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಿದ್ದರಿಂದ ರೋಗಿಗಳ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ . ಎಲ್ಲ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಿದವು ಎಂದು ತಿಳಿಸಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net