ಕ್ರೀಡೆಯಿಂದ ಒತ್ತಡ ದೂರ, ಮನಸ್ಸಿಗೆ ಉಲ್ಲಾಸ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Government Employees Sports mandya
Published on

ಮಂಡ್ಯ: ಸರ್ಕಾರಿ ನೌಕರರು ಕೆಲಸದ ಕಾರಣದಿಂದ ಬಹಳ ಒತ್ತಡದಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡ ದೂರವಾಗಿ ದೇಹಕ್ಕೆ ಕಸರತ್ತು, ಮನಸ್ಸಿಗೆ ಉಲ್ಲಾಸ ಸಿಗುತ್ತದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ನೌಕರರ ಸಂಘದ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಎರಡು ದಿನದ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿದಿನ ವ್ಯಾಯಾಮ, ನಡಿಗೆಗೆ ಸಮಯ ಮೀಸಲಿಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಮಾತ್ರವಲ್ಲದೆ ದೈನಂದಿನ ಕೆಲಸಗಳನ್ನು ಕ್ರಿಯಾಶೀಲರಾಗಿ ಮಾಡಬಹುದು ಎಂದರು.

ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕ್ರೀಡಾಸಕ್ತಿ ಮತ್ತು ಮನೋಭಾವನೆ ಇರುವವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರುತ್ತಾರೆ. ಕ್ರೀಡೆ ಪ್ರತಿಯೊಬ್ಬರ ಬದುಕಿನಲ್ಲಿ ಒಂದು ಅವಿಭಾಜ್ಯ ಅಂಗವಾಗಬೇಕು. ಪ್ರತಿಯೊಬ್ಬರೂ ಆರೋಗ್ಯವಾಗಿರಲು ಯೋಗಾಭ್ಯಾಸ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಳ್ಳೆಯ ಅಭಿರುಚಿ ಬೆಳೆಸಿಕೊಳ್ಳಬೇಕು. ದಿನದ 24 ಗಂಟೆಯಲ್ಲಿ ಪ್ರತಿದಿನ ಬೆಳಗ್ಗೆ 1 ಗಂಟೆ ಯೋಗ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮೀಸಲಿಟ್ಟರೆ ಉಳಿದ 23 ಗಂಟೆಗಳ ಕಾಲ ಕ್ರಿಯಾತ್ಮಕ, ಸರಾಗವಾಗಿ ಕೆಲಸವನ್ನು ನಿರ್ವಹಿಸಬಹುದು. ಈ ಮೂಲಕ ದೇವರು ಕೊಟ್ಟಂತಹ ದೇಹವನ್ನು ಸರಿಯಾಗಿ ಬಳಸಿಕೊಳ್ಳುವುದು ಎಲ್ಲರ ಕೈಯಲ್ಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಪ್ರಸ್ತುತದ ದಿನದಲ್ಲಿ 15 ಲಕ್ಷ ಜನರು ನಿರ್ವಹಿಸಬೇಕಾದ ಕೆಲಸವನ್ನು ಕೇವಲ 5 ಲಕ್ಷ ಜನ ಮಾಡುತ್ತಿರುವುದರಿಂದ ನೌಕರರಲ್ಲಿ ಒತ್ತಡ ಹೆಚ್ಚಿದೆ. ಇದನ್ನು ಕಡಿಮೆ ಮಾಡಲು ಪ್ರತಿ 3 ತಿಂಗಳಿಗೊಮ್ಮೆ 1 ಅಥವಾ 2 ದಿನ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲು ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯಯುತ ಶೈಲಿಯ ಜೀವನ ನಡೆಸಿ ಮುಂದಿನ ಪೀಳಿಗೆ ಅನುಸರಿಸುವಂತೆ ಮಾದರಿಯಾಗಿ ಬದುಕಬೇಕು. ಎಲ್ಲರೂ ತಮ್ಮ ಮಕ್ಕಳಿಗೆ ಮೊಬೈಲ್ ಗೇಮ್ಸ್ ಆಡುವ ಬದಲು ದೈಹಿಕ ಕ್ರೀಡೆಗೆ ಗಮನವಹಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಶಂಭುಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net