ಸರ್ಕಾರಿ ನೌಕರರಿಗೆ ಲೋಕಾ ಬಗ್ಗೆ ಭಯ, ಆತಂಕ ಬೇಡ

22 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸರ್ಕಾರಿ ನೌಕರರು ಹುದ್ದೆಗೆ ಅನ್ವಯಿಸುವ ಕಾರ್ಯಗಳನ್ನು ನಿಯಮಾನುಸಾರ ಮಾಡಿದರೆ ದೂರುಗಳ ಪ್ರಶ್ನೆ ಇಲ್ಲ. ಲೋಕಾಯುಕ್ತ ಬಗ್ಗೆ ಅನಗತ್ಯ ಭಯ, ಆತಂಕ ಪಡದೆ ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿ, ವೃತ್ತಿ ನಿಷ್ಠೆ ತೋರಬೇಕು. ಲೋಕಾಯುಕ್ತ ಕಾಯಿದೆ, ಕಾರ್ಯಗಳ ಬಗ್ಗೆ ಅರಿವು ಹೊಂದುವುದು ಅಗತ್ಯ ಇದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಕೆ.ಎನ್​. ಫಣೀಂದ್ರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಲೋಕಾಯುಕ್ತ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಲೋಕಾಯುಕ್ತ ಕಾಯಿದೆಯ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಲೋಕಾಯುಕ್ತ ಕಾಯಿದೆ ಬಗ್ಗೆ ಸರ್ಕಾರಿ ನೌಕರರಿಗೆ ಭಯ, ಆತಂಕ ಬೇಡ. ಕಾನೂನು ಬಗ್ಗೆ ಸರಿಯಾದ ಅರಿವು, ತಿಳಿವಳಿಕೆ ಇರಲಿ. ಲೋಕಾಯುಕ್ತವು ಸಾರ್ವಜನಿಕ ನೌಕರರ ಕರ್ತವ್ಯ, ದುರ್ನಡತೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಮತ್ತು ವರದಿ ಮಾಡಲು ಸ್ಥಾಪಿಸಲಾಗಿರುವ ಸಂಸ್ಥೆ. ಸಾರ್ವಜನಿಕ ಆಡಳಿತದ ಗುಣಮಟ್ಟ ಸುಧಾರಣೆ, ಸಾರ್ವಜನಿಕ, ಸರ್ಕಾರಿ ನೌಕರರ ದುರ್ನಡತೆಯಿಂದ ಸಂಭವಿಸಿದ ಕುಂದುಕೊರತೆಗಳನ್ನು ನಿವಾರಿಸುವುದು ಸಂಸ್ಥೆ ಕಾರ್ಯ ವ್ಯಾಪ್ತಿಗೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಮಾತನಾಡಿ, ಸಮಾನತೆ ಸಂದೇಶ ಹೊತ್ತ ನಾವು ಪ್ರತಿಯೊಂದರಲ್ಲೂ ಪ್ರಾಮಾಣಿಕತೆ ಅಗತ್ಯ. ಕರ್ನಾಟಕ ಲೋಕಾಯುಕ್ತ ಮಾದರಿಯಾಗಿದೆ. ಪ್ರತಿಯೊಬ್ಬ ಅಧಿಕಾರಿಯು ಲೋಪವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಹಂತದಲ್ಲಿ ಕೆಲಸ ಮಾಡುವಾಗ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ನಿಷ್ಠೆ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಳ್ಳೋಣ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಸ್ವರೂಪ ಟಿ.ಕೆ., ಉಪ ಪೊಲೀಸ್​ ಆಯುಕ್ತ ಸಿ.ಆರ್​. ರವೀಶ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಿ.ಶ್ರೀನಿವಾಸ, ನರಸಿಂಹಸಾ ಎಂ.ವಿ., ಹಿರಿಯ ಸಿವಿಲ್​ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಕಿರಣ ಪಿ.ಎಂ.ಪಾಟೀಲ್​, ಜಿಲ್ಲಾ ಲೋಕಾಯುಕ್ತ ಪೊಲೀಸ್​ ಅಧೀಕ ಹನುಮಂತರಾಯ, ವಿವಿಧ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net