ಸರ್ಕಾರಿ ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ಸಂಬಳಕ್ಕೆ ಯಾವುದೇ ಸಮಸ್ಯೆ ಇಲ್ಲ!

Employees 22 April 20
Published on

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಸರ್ಕಾರಕ್ಕೆ ಆದಾಯವೇ ನಿಂತು ಹೋಗಿದೆ, ಇಂಥ ಸಂದರ್ಭದಲ್ಲಿ ನಮ್ಮ ಸಂಬಳಕ್ಕೆ ಎಲ್ಲಿ ಕತ್ತರಿ ಬೀಳುತ್ತದೋ ಎಂಬ ಅಳುಕಿನಲ್ಲಿದ್ದ ಸರ್ಕಾರಿ ನೌಕರರು ಸಮಾಧಾನ ಪಟ್ಟುಕೊಳ್ಳುವ ಸುದ್ದಿಯೊಂದಿದೆ.

ಏಪ್ರಿಲ್‌ನ ವೇತನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ, ಕಡಿತವೂ ಮಾಡುವುದಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತೆಲಂಗಾಣ ಸೇರಿ ವಿವಿಧ ರಾಜ್ಯಗಳಲ್ಲಿ ಸರ್ಕಾರಿ ನೌಕರರ ವೇತನ ಕಡಿತ ಪ್ರಸ್ತಾಪ ಮಾಡಲಾಗಿದೆ. ಆದರೆ, ನಾವು ಕಡಿತ ಮಾಡುವ ಆಶಯ ಹೊಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದ ಬೊಕ್ಕಸಕ್ಕೆ ಆದಾಯ ಬರದೇ ಇರಬಹುದು, ಈ ತಿಂಗಳು ವೇತನ ಪಾವತಿಗೆ ಸಮಸ್ಯೆಯಾಗದಂತೆ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಳ್ಳಲಾಗುತ್ತದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.
ಸಚಿವರು, ಶಾಸಕರು, ಪರಿಷತ್ ಸದಸ್ಯರ ವೇತನ ಕಡಿತ ತೀರ್ಮಾನ ಹೊರಬೀಳುತ್ತಿದ್ದಂತೆ ಮಾರ್ಚ್‌ನಲ್ಲಿ ವೇತನ ಕಡಿತವಾಗಬಹುದು ಎಂದು ಕೆಲವರು ಭಾವಿಸಿದ್ದರು, ಬಳಿಕ ಏಪ್ರಿಲ್‌ನಲ್ಲಿ ಸಮಸ್ಯೆ ಆಗಬಹುದೆಂದು ನೌಕರರ ಹಂತದಲ್ಲಿ ಚರ್ಚೆಯೂ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೇತನ ಕಡಿತ ಯಾವುದೇ ಪ್ರಸ್ತಾಪ ಇಲ್ಲ ಎಂದಿದ್ದರು.

ಏಪ್ರಿಲ್‌ನಲ್ಲಿ ಸರ್ಕಾರದ ಬೊಕ್ಕಸಕ್ಕೆ ಹಣ ಬಾರದೇ ಇರಬಹುದು. ಆದರೆ, ವಿವಿಧ ಮೂಲಗಳಲ್ಲಿ ಮೀಸಲಿಟ್ಟಿರುವ ಹಣವನ್ನು ಬಳಸಿಕೊಳ್ಳಲು ಅವಕಾಶವಿದೆ. ಸರಿಸುಮಾರು ಒಂದು ತಿಂಗಳಿಗೆ 7500 ಕೋಟಿ ರೂಪಾಯಿ ವೇತನ, ಪಿಂಚಣಿಗೆ ಬೇಕಾಗಬಹುದು. ಅಷ್ಟು ಹಣದ ಕೊರತೆ ಏನಿಲ್ಲ. ಮುಂದೆ ಪರಿಸ್ಥಿತಿ ಸುಧಾರಿಸಲಿದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net