ಸರ್ಕಾರಿ ನೌಕರರ ಸಂಘಕ್ಕೆ 16 ರಂದು ಚುನಾವಣೆ

Published on

ಮುದ್ದೇಬಿಹಾಳ: 2024-29ನೇ ಸಾಲಿನ 5 ವರ್ಷಗಳ ಅವಧಿಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುದ್ದೇಬಿಹಾಳ ತಾಲೂಕು ಘಟಕ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರ ಆಯ್ಕೆಯಾಗಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು ನ.16 ರಂದು ಮತದಾನ ನಿಗದಿಪಡಿಸಲಾಗಿದೆ.

ನ.7 ರಂದು ಸಂಜೆ 5 ಗಂಟೆಗೆ ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿದೆ. ನ.8 ರಂದು ಬೆಳಗ್ಗೆ 11 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ, ನಂತರ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುತ್ತದೆ. ನ.11 ರಂದು ಸಂಜೆ 4.30 ಗಂಟೆಯವರೆಗೆ ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಅವಕಾಶವಿದೆ.

ಅಂದೇ ಸಂಜೆ 5.30ರ ನಂತರ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಅಗತ್ಯವಿದ್ದರೆ ನ.16 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ, ನಂತರ ಮತ ಎಣಿಕೆ, ತದನಂತರ ಲಿತಾಂಶ ಘೋಷಣೆ ಆಗಲಿದೆ. ಚುನಾವಣಾಧಿಕಾರಿಯಾಗಿ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಕಟ್ಟಿಮನಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈಗಾಗಲೇ ಸಂಘದ ನಿರ್ದೇಶಕರ ಸ್ಥಾನಗಳಿಗೆ ಆಯ್ಕೆಯಾದ 30 ನಿರ್ದೇಶಕರ ಪಟ್ಟಿಯನ್ನು ಅ.28 ರಂದು ಚುನಾವಣಾಧಿಕಾರಿ ಪ್ರಕಟಿಸಿದ್ದು ಇದೇ ಪಟ್ಟಿಯಲ್ಲಿರುವ ನಿರ್ದೇಶಕರಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿದೆ. ಮಂಗಳವಾರ ಸಂಜೆಯವರೆಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಕೋರಿ ಕೃಷಿ ಇಲಾಖೆಯಿಂದ ಕೃಷಿ ಅಧಿಕಾರಿ ಅರವಿಂದ ಹೂಗಾರ, ಕಂದಾಯ ಇಲಾಖೆಯಿಂದ ನಾಲತವಾಡ ಹೋಬಳಿ ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಬಿ.ಎಸ್.ಹೊಳಿ, ಆರೋಗ್ಯ ಇಲಾಖೆಯಿಂದ ಆನಂದಗೌಡ ಬಿರಾದಾರ ನಾಮಪತ್ರ ಸಲ್ಲಿಸಿದ್ದಾರೆ. ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಸ್ಥಾನಗಳಿಗೆ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net