

ಸೊರಬ: ನಾನು ಸರ್ಕಾರಿ ನೌಕರರಿಗೆ ಅಂದು, ಇಂದು ಕಿರುಕುಳ ಕೊಟ್ಟ ಉದಾಹರಣೆ ಇಲ್ಲ. ಅವರ ಪ್ರೀತಿ ವಿಶ್ವಾಸ ಪಡೆದು ಆಡಳಿತ ನಡೆಸುತ್ತ ಬಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ರಂಗಮಂದಿದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಸೋಮವಾರ ಹಮ್ಮಿಕೊಂಡ ಸರ್ಕಾರಿ ನೌಕರರ ಸಮ್ಮೇಳನ, ಕಾರ್ಯಾಗಾರ ಹಾಗೂ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ನೌಕರರು ಹಾಗೂ ಜನತೆ 45 ಸಾವಿರ ಮತಗಳ ಅಂತರದಿಂದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲ್ಲಿಸಿದ್ದು ಸಂತಸ ತಂದಿದೆ. ಸರ್ಕಾರಿ ನೌಕರರ ಭವನ ಸೇರಿದಂತೆ ತಾಲೂಕಿನ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಪ್ರೀತಿಪಾತ್ರರಾದ ಏಕೈಕ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಾಗಿದ್ದರು. ಅದೇ ಹಾದಿಯಲ್ಲಿ ನಾನು ಹೆಜ್ಜೆ ಹಾಕುತ್ತಿದ್ದು, ಮುಕ್ತ ಹಾಗೂ ಪ್ರಾಮಾಣಿಕತೆಯಿಂದ ನೌಕರರು ಕೆಲಸ ಮಾಡಿ ಎಂದರು.
ನೌಕರರು ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವ ಬಗ್ಗೆ ನಮಗೆ ಮನವರಿಕೆ ಮಾಡಿದ್ದೀರಿ. ಆ ಬಗ್ಗೆ ಪ್ರಣಾಳಿಕೆಯಲ್ಲಿ ಹಾಕಿರುವ ಜತೆಗೆ ಜಾರಿಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ. 7ನೇ ವೇತನ ಆಯೋಗದ ಬಗ್ಗೆ ನೌಕರರೇ ಸರ್ಕಾರದ ಗಮನ ಸೆಳೆಯಬೇಕು. ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತರುವ ಅಗತ್ಯವಿರುವುದು ನಮ್ಮ ಗಮನದಲ್ಲಿದೆ. ಅನುದಾನಿತ ಶಾಲಾ ನೌಕರರ ಹಿತ ಕಾಯಲಾಗುವುದು ಎಂದರು.
ಮಕ್ಕಳಿಗೆ ಶಿಕ್ಷಣ ನೀಡುವುದೇ ದೇವರ ಕೆಲಸ ಎಂದುಕೊಂಡಿರುವ ನಾನು ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ನಾನು ಶಿಕ್ಷಣ ಇಲಾಖೆ ಸಚಿವನಾದ ಬಳಿಕ 32 ಸಾವಿರ ಶಿಕ್ಷಕ ವರ್ಗಾವಣೆ ಚಾಲನೆ ನೀಡಿ ಅವರ ಹಿತ ಕಾಯಲಾಗಿದೆ. ಹಾಗೆಯೇ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಜತೆಗೆ ಮತ್ತೆ 15 ಸಾವಿರ ಶಿಕ್ಷಕರ ನೇಮಕಾತಿ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರ ಒಪಿಎಸ್ ಜಾರಿ ಸೇರಿದಂತೆ 7ನೇ ವೇತನ, ಆರೋಗ್ಯ ಸಂಜೀವಿನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಂತರ ನೌಕರರ ಭವನ ಕಾಮಗಾರಿ ಪೂರ್ಣಗೊಳಿಸುವುದು ಸೇರಿದಂತೆ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ನಿನೃತ್ತ ನೌಕರರಿಗೆ ಹಾಗೂ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಲಾಯಿತು. ಶಿವಮೊಗ್ಗ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಎಚ್.ರವಿಕುಮಾರ್ ಸರ್ಕಾರಿ ನೌಕರರ ಕಾರ್ಯವೈಖರಿಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಆಯನೂರು ಮಂಜುನಾಥ್, ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮೋಹನ್‌ಕುಮಾರ್, ತಾಲೂಕು ಸಂಘದ ಕಾರ್ಯದರ್ಶಿ ಸಿ.ಪಿ.ಸದಾನಂದ, ಗೌರವಾಧ್ಯಕ್ಷ ಸಿ.ಎಚ್.ವಿಶ್ವನಾಥ್, ರಾಜ್ಯ ಪರಿಷತ್ ಸದಸ್ಯ ಸರ್ವಜ್ಞಮೂರ್ತಿ, ಸಂತೋಷ್‌ಕುಮಾರ್, ನಟೇಶ್, ದೀಪಕ್ ಧೋೀಂಗಡೇಕರ್, ಪ್ರಶಾಂತ್, ತಹಸೀಲ್ದಾರ್ ಹುಸೇನ್ ಸರಕಾವಸ್, ಇಒ ಡಾ. ಪ್ರದೀಪ್‌ಕುಮಾರ್, ಬಿಇಒ ಟಿ.ಎಂ.ಸತ್ಯನಾರಾಯಣ, ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಸಹಾಯಕ ಕೃಷಿ ನಿರ್ದೇಶಕ ಕೆ.ಜಿ.ಕುಮಾರ್, ಎಇಇ ಯಶೋದರ್, ನಾಗರಾಜ್ ಅಣ್ವೇಕರ್, ರೇವಣಪ್ಪ, ಇಕ್ಬಾಲ್ ಜಾತಿಗೇರ್, ವಿನಯ್ ಪಾಟೀಲ್, ಎಚ್.ಆಶಾ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.