ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರಿಂದ ದಾವಣಗೆರೆಯಲ್ಲಿ ಕಾಲ್ನಡಿಗೆ ಜಾಥಾ

dvg ksrtc feb 3
Published on

ದಾವಣಗೆರೆ: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ದಾವಣಗೆರೆ ವಿಭಾಗೀಯ ಘಟಕದ ನೇತೃತ್ವದಲ್ಲಿ ಸಾರಿಗೆ ನೌಕರರು ಸೋಮವಾರ ಕಾಲ್ನಡಿಗೆ ಜಾಥಾ ನಡೆಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಡಿಸಿ ಕಚೇರಿಗೆ ತೆರಳಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಹಗಲು, ರಾತ್ರಿ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯ ಎಲ್ಲ ವಿಚಾರಗಳಲ್ಲೂ ಸರ್ಕಾರವೇ ನೇರವಾಗಿ ನಿರ್ಣಯಗಳನ್ನು ಕೈಗೊಳ್ಳುತ್ತದೆ. ನೌಕರರ ವರ್ಗಾವಣೆ, ಹೊಸ ಬಸ್‌ಗಳ ಖರೀದಿ , ನೌಕರರ ವೇತನ ಹೆಚ್ಚಳ, ಪ್ರಯಾಣಿಕರ ಟಿಕೆಟ್ ದರ ನಿರ್ವಹಣೆ , ವಿವಿಧ ಪಾಸ್‌ಗಳ ದರ ನಿರ್ವಹಣೆ ಈ ಎಲ್ಲ ಕಾರ್ಯಗಳಿಗೆ ಸರ್ಕಾರದ ಅನುಮತಿ ಬೇಕು. ಆದರೆ, ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸದಿರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ದಿನ ನಡೆದಿರುವ ಜಾಥಾದಲ್ಲಿ ಸಂಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆಗೆ ಅಡಚಣೆಯಾಗದಂತೆ ಕರ್ತವ್ಯಕ್ಕೆ ಗೈರು ಹಾಜರಾಗದೇ ವಾರದ ರಜೆ ಇರುವವರು, ಕರ್ತವ್ಯ ಮುಗಿಸಿದವರು ಮತ್ತು ಅವರ ಕುಟುಂಬದವರೂ ಭಾಗಿಯಾಗಿ ನಮ್ಮ ಕೂಗನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಜಾಥಾ ಹಮ್ಮಿಕೊಂಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net