

ಮಂಡ್ಯ: ಸರ್ಕಾರಿ ನೌಕರರ ಸರಿ ಸಮಾನ ವೇತನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ. 1ರಿಂದ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರೊಡನೆ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಾರಿಗೆ ನೌಕರರ ಕೂಟದ ಕಾರ‌್ಯಾಧ್ಯಕ್ಷ ವಿಶ್ವನಾಥ್ ತಿಳಿಸಿದರು.
ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಸರ್ಕಾರ ಸಾರಿಗೆ ನೌಕರರಿಗೆ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸದೆ ಭಾರೀ ನಿರಾಸೆ ಉಂಟುಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಡಿಸೆಂಬರ್ ತಿಂಗಳಲ್ಲಿ ಸಾರಿಗೆ ಮುಷ್ಕರದ ಸಮಯದಲ್ಲಿ ಅಂದಿನ ಸಾರಿಗೆ ಸಚಿವ ಲಕ್ಷ್ಮಣ್ ಸವತಿ ಅವರು ಅಂದಿನ ಗೃಹ ಸಚಿವರೂ ಆಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ನೌಕರರಿಗೂ 6ನ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಸಾರಿಗೆ ಸಚಿವರು ಅನೇಕ ಬಾರಿ ಮಾಧ್ಯಮಗಳಲ್ಲಿ 6ನೇ ವೇತನ ಆಯೋಗ ಸಾರಿಗೆ ನೌಕರರಿಗೆ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿಕೆ ನೀಡಿ ಕೊನೆಗೆ ತೆಗೆದುಕೊಂಡ ಕಾಲಾವಯಲ್ಲಿ ಈಡೇರಿಸದ ಕಾರಣ ಏಪ್ರಿಲ್ ತಿಂಗಳಲ್ಲಿ ಮುಷ್ಕರ ಮಾಡಿದ ವೇಳೆ ಸಾವಿರಾರು ನೌಕರರನ್ನು ವಜಾ, ವರ್ಗಾಣೆ ಮತ್ತು ಅಮಾನತ್ತು ಮಾಡಿ ನೌಕರರು ಮತ್ತು ಕುಟುಂಬ ಸದಸ್ಯರ ಮೇಲೆ ಸುಳ್ಳು ಪೊಲೀಸ್ ಕೇಸನ್ನು ಹಾಕಲಾಗಿತ್ತು ಎಂದು ದೂರಿದರು.
ನಂತರದ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಲಿಖಿತ ಭರವಸೆಯನು ಈಡೇರಿಸುವಂತೆ ಮತ್ತು ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಅನೇಕ ಬಾರಿ ಮನವಿ ಮಾಡಿಕೊಂಡು ಶಾಂತಿಯುತ ಹೋರಾಟಗಳನ್ನು ಮಾಡಿದರೂ ಕೊಟ್ಟ ಲಿಖಿತ ಭರವಸೆ ಈಡೇರಿಸಿರುವುದುಲ್ಲಘಿ. ಸಮಸ್ಯೆಗಳನ್ನೂ ನಿವಾರಣೆ ಮಾಡಿಲ್ಲ ಈ ಹಿಂದೆ ಸಾರಿಗೆ ಸಚಿವರು ಬಹಿರಂಗ ಸಭೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಾರಿಗೆ ನೌಕರರನ್ನು 7ನೇ ವೇತನ ಆಯೋಗದಿಂದ ಕೈಬಿಟ್ಟಿದ್ದುಘಿ, ಸಾರಿಗೆ ನೌಕರರನ್ನು 7ನೇ ವೇತನ ಆಯೋಗದಲ್ಲಿ ಸೇರ್ಪಡೆ ಮಾಡುವುದು ನನ್ನ ಜವಾಬ್ದಾರಿ ಎಂದಿದ್ದರು. ಆದರೆ ಸರ್ಕಾರದ ಕೊನೆ ಬಜೆಟ್‌ನಲ್ಲಿ ಯಾವುದೇ ಆಶ್ವಾಸನೆ ನೀಡದೆ ನಿರಾಸೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮುಷ್ಕರದ ಸಮಯದಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ನೌಕರರಿಗೆ ಆಗಿರುವ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಿ ಯಥಾಸ್ಥಿತಿ ಕಾಪಾಡಬೇಕು. ಸರ್ಕಾರ ನೀಡಿರುವ ಲಿಖಿತ ಭರವಸೆಯಂತೆ ಸಾರಿಗೆ ನೌಕರರಿಗೂ ವೇತನ ಆಯೋಗದ ಮಾದರಿಯಲ್ಲಿ ಸರ್ಕಾರಿ ನೌಕರರ ಸರಿ ಸಮಾನ ವೇತನ ನೀಡುವುದು, ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸುವುದು. ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸಾರಿಗೆ ಸಂಸ್ಥೆಯ ತಾಳಶಾಸನ ಮೋಹನ್, ರವಿ, ಉಮಾಶಂಕರ್ ಇದ್ದರು