ಮಾ.1ರಿಂದ ಅನಿರ್ದಿಷ್ಟಾವಧಿ ಮುಷ್ಕರ: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಗೌಡ ಮಾಹಿತಿ

DSC_0203
Published on

ಮಂಡ್ಯ: ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಮಾ.1ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಅಸಹಕಾರ ಚಳವಳಿ ಮತ್ತು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಶಂಭುಗೌಡ ಹೇಳಿದರು.

ಕರ್ತವ್ಯಕ್ಕೆ ಗೈರಾಗಲು 8000 ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಬಜೆಟ್ ಗಾತ್ರ ಹೆಚ್ಚುತ್ತಲೇ ಇದ್ದು, ಸರ್ಕಾರ ಹೊಸಹೊಸ ಕಾರ‌್ಯಕ್ರಮಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯದಲ್ಲಿ ಶೇ.39ರಷ್ಟು ನೌಕರರ ಹುದ್ದೆಗಳ ಖಾಲಿ ಇವೆ. ಆದಾಗ್ಯೂ ಇರುವ ನೌಕರರೇ ಒತ್ತಡದ ನಡುವೆಯೂ ಎಲ್ಲ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ಹೊರಬೇಕಿದೆ. ಹಾಗೆಯೇ ನಾವು ಎಲ್ಲ ಕೆಲಸ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2022-23ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ 77 ಸಾವಿರ ಕೋಟಿ ರೂ ಜಿಎಸ್‌ಟಿ ಸಂಗ್ರಹದ ಗುರಿಯಿತ್ತು. ಆದರೆ, ಫೆ.23ರವರೆಗೆ ಬರೋಬ್ಬರಿ 95 ಸಾವಿರ ಕೋಟಿ ರೂ ಜಿಎಸ್‌ಟಿ ಸಂಗ್ರಹಿಸಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಈ ಮೊತ್ತ 1.05 ಲಕ್ಷ ಕೋಟಿ ರೂ ಸಾಧ್ಯತೆಯಿದೆ. ಇಷ್ಟಾಗಿಯೂ ಸರ್ಕಾರ ನಮ್ಮ ಸಮಸ್ಯೆಗಳು, ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ವೇತನ ಪರಿಷ್ಕರಣೆ ಸಂಬಂಧ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್ ಅವರ ಅಧ್ಯಕ್ಷತೆಯ 7ನೇ ವೇತನ ಆಯೋಗ ರಚಿಸಲಾಗಿತ್ತು. ಈ ಆಯೋಗಕ್ಕೆ ಸಂಘದಿಂದ ವಿಸ್ತತ ವರದಿ ಸಲ್ಲಿಸಿತ್ತು. ಆದ್ದರಿಂದ ಆಯೋಗದಿಂದ ವರದಿ ಪಡೆದು 2022ರ ಜು.1ರಿಂದ ಜಾರಿಗೆ ಬರುವಂತೆ ಶೇ.40ರಷ್ಟು ವೇತನ ಹೆಚ್ಚಳ ಸೌಲಭ್ಯ ನೀಡಬೇಕೆಂದು ಆದೇಶಿಸಬೇಕು. ಅಂತೆಯೇ ಪಂಜಾಬ್, ರಾಜಸ್ತಾನ, ಛತ್ತೀಸ್‌ಘಡ್, ಜಾರ್ಖಂಡ್, ಹಿಮಾಚಲಪ್ರದೇಶ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಎನ್‌ಪಿಎಸ್‌ನ್ನು ರದ್ದುಗೊಳಿಸಿ ಒಪಿಎಸ್ ಅನ್ನೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ತಮ್ಮಣ್ಣ, ಶ್ರೀನಿವಾಸ್, ಶಿವಲಿಂಗು, ಕೃಷ್ಣ, ನಾಗರಾಜು, ದೇವರಾಜು, ಶಿವಲಿಂಗೇಗೌಡ, ಮೂಗೂರೇಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net