

ಹುಣಸೂರು: ಮಹಿಳಾ ಸಬಲೀಕರಣದಿಂದ ಮಾತ್ರ ಸಮುದಾಯ ಸದೃಢತೆ ಸಾಧಿಸಲು ಸಾಧ್ಯವೆಂದು ಜಿಲ್ಲಾ ಪಂಚಾಯಿತಿಯ ಎನ್‌ಆರ್‌ಎಲ್‌ಎಂನ ಜಿಲ್ಲಾ ಯೋಜನಾ ನಿರ್ದೇಶಕ ಪ್ರಭುಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಅಂಬೇಢ್ಕರ್ ಭವನದಲ್ಲಿ ಸೋಮವಾರ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಬೆಂಗಳೂರು, ಜಿ.ಪಂ, ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕಲ್ಪವೃಕ್ಷ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌ನ 2ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹಲವು ಯೋಜನೆಗಳನ್ನು ರೂಪಿಸಿದೆ. ಈ ಪೈಕಿ ಮಹಿಳಾ ರೈತ ಉತ್ಪಾದಕರನ್ನು ರೂಪಿಸುವ ಮಹತ್ತರ ಯೋಜನೆಯಾಗಿ ಇದೀಗ ಕಲ್ಪವೃಕ್ಷ ಕಂಪನಿ ತನ್ನ 2ನೇ ವರ್ಷವನ್ನು ಪೂರೈಸುತ್ತಿದೆ. ಸರ್ಕಾರ ನೀಡುವ ಅನುದಾನಗಳನ್ನು ಯಾವುದೇ ಲೋಪವಾಗದಂತೆ ಬಳಸಿಕೊಳ್ಳಿ. ನೀವು ಉತ್ಪಾದಕರಾಗುತ್ತಿದ್ದೀರಿ ಎನ್ನುವ ಹೆಮ್ಮೆ ನಿಮ್ಮದಾಗಲಿ ಎಂದು ಹಾರೈಸಿದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ ಮಾತನಾಡಿ, ಕುಟುಂಬದ ಅಭಿವೃದ್ಧಿ ಕೇವಲ ಮಣ್ಣಿನಿಂದಲ್ಲ, ಹೆಣ್ಣಿನಿಂದ ಎನ್ನುವ ನಾಣ್ನುಡಿಉನ್ನು ಸಾರ್ಥಕಗೊಳಿಸಲು ನಿಮ್ಮ ಅವಿರತ ಶ್ರಮದ ಅಗತ್ಯವಿದೆ. ಮಹಿಳೆಯರು ಸಾಧಿಸಬಲ್ಲರು ಎನ್ನುವ ಕಾರಣಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ಎನ್‌ಆರ್‌ಎಲ್‌ಎಂನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಮಂಜುಳಾ ನರಗುಂದ್ ಮಾತನಾಡಿ, ತಾಲೂಕಿನ 105 ಮಹಿಳಾ ರೈತ ಉತ್ಪಾದಕರ ಗುಂಪುಗಳ ಪೈಕಿ 50 ಗುಂಪುಗಳನ್ನು ಬಳಸಿಕೊಂಡು(ಪ್ರತಿ ಗುಂಪಿನಲ್ಲಿ 20 ಸದಸ್ಯರು) ಅವರನ್ನು ಷೇರುದಾರ(ಒಟ್ಟು 1000 ಷೇರುದಾರರು)ರನ್ನಾಗಿಸಿ ಕಲ್ಪವೃಕ್ಷ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಸ್ಥಾಪಿಸಲಾಗಿದೆ. ಕಂಪನಿ ಸ್ಥಾಪನೆಯ ಮೂಲ ಉದ್ದೇಶ ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಕಲ್ಪಿಸುವುದು, ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕಗಳ ಪೂರೈಕೆ, ಕೃಷಿ ಯಂತ್ರೋಪಕಣಗಳ ಪೂರೈಕೆ, ಮೌಲ್ಯವರ್ಧಿತ ಸರಕುಗಳ ಉತ್ಪಾದನೆಯೂ ಸೇರಿದಂತೆ ರೈತಮಹಿಳೆಯರನ್ನು ಉತ್ಪಾದಕರನ್ನಾಗಿಸುವುದಾಗಿದೆ. ಇದೀಗ ಕಂಪನಿಯ ಷೇರುದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಪಂನಿಂದ ಷೇರುದಾರರಿಗೆ ತರಬೇತಿ ಮುಂತಾದ ವಿವಿಧ ಉದ್ದೇಶಕ್ಕಾಗಿ ಒಟ್ಟು 39.44 ಲಕ್ಷ ರೂ.ಗಳ ಅನುದಾನ ದೊರಕಿದೆ. ಅಲ್ಲದೆ ಷೇರುದಾರರ ಷೇರುಮೊತ್ತ 1500 ರೂ.ಗಳಿಗೆ ಈಕ್ವಿಟಿ ಮೊತ್ತವಾಗಿ ಪ್ರತಿ ಗುಂಪಿಗೆ 1.5 ಲಕ್ಷ ರೂ. ಸಹ ಬಿಡುಗಡೆಯಾಗಿದೆ. ಮೂರು ವರ್ಷಗಳ ಕಾಲ ಸರ್ಕಾರ ನೇರವಾಗಿ ಕಂಪನಿಗೆ ಎಲ್ಲ ರೀತಿಯ ಸಹಾಯ ಹಸ್ತ ನೀಡುತ್ತದೆ. ಆ ಮೂಲಕ ರೈತ ಮಹಿಳೆಯರು ಯೋಜನೆಯ ಸದುಪಯೋಗ ಪಡಿಸಿಕೊಂಡು ಉತ್ಪಾದಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಕಂಪನಿಯ ಸಿಇಒ ಗುಣಶೇಖರ್, 2024-25ರ ವಾರ್ಷಿಕ ವರದಿ ಮತ್ತು 2025-26ರ ಕ್ರಿಯಾಯೋಜನೆ ಮಂಡಿಸಿ, ಕಂಪನಿಗೆ ನಗರಸಭೆಯಿಂದ ಮಾರಾಟ ಪರವಾನಗಿ ದೊರಕಿದೆ. ಬಿತ್ತನೆಬೀಜ ಮಾರಾಟ, ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಕ್ಕೆ, ಎಪಿಎಂಸಿ ಆವರಣದಲ್ಲಿ ಮಾರಾಟಕ್ಕೆ ಅವಕಾಶಕ್ಕಾಗಿ ಪರವಾನಗಿ ದೊರಕಬೇಕಿದೆ. ಕಂಪನಿ ವತಿಯಿಂದ ಷೇರುದಾರರಿಗೆ ಟಾರ್ಪಲ್‌ಗಳನ್ನು ವಿತರಿಸಲು ಮುಂದಾಗಿದ್ದೇವೆ. ಜೈವಿಕ ಗೊಬ್ಬರ ಬಳಕೆಗೆ ಆದ್ಯತೆ, ಪೈಪ್‌ಸೆಟ್‌ಗಳ ವಿತರಣೆಗೆ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಶುವೈದ್ಯಾಧಿಕಾರಿ ಡಾ.ಚನ್ನಬಸಪ್ಪ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು, ಕೃಷಿ ಇಲಾಖೆ ಕೃಷಿ ಅಧಿಕಾರಿ ವೆಂಕಟೇಶ್ ಇಲಾಖೆಗಳಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಿದರು. ಜಿಲ್ಲಾ ಎನ್‌ಆರ್‌ಎಲ್‌ಎಂ ಕಾರ್ಯಕ್ರಮ ವ್ಯವಸ್ಥಾಪಕಿ ಆಶಾ, ನರೇಗಾ ಎಇಇ ಗಿರಿಧರ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಜೇಶ್ ಹಾಗೂ ಕಂಪನಿಯ ನಿರ್ದೇಶಕಿ ಎಚ್.ಕೆ.ಸವಿತಾ ಮಾತನಾಡಿದರು. ಇದೇ ವೇಳೆ ಕಳೆದ ಸಾಲಿನಲ್ಲಿ ಸಾಧಕ ರೈತ ಮಹಿಳೆಯಾಗಿ ಸಾಧನೆಗೈದಿದ್ದ ಕಂಪನಿ ನಿರ್ದೇಶಕಿ ಎಚ್.ಕೆ.ಸವಿತಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಂಪನಿ ನಿರ್ದೇಶಕರಾದ ರಾಣಿ ಎಲಿಜಬೆತ್, ವಸಂತಮ್ಮ, ರೂಪಾ, ಶಿವಮ್ಮ, ಸಾಕಮ್ಮ, ಶಾಬಾಜ್, ಫರಾಬಾನು, ಎನ್‌ಆರ್‌ಎಲ್‌ಎಂನ ಎಂ.ಎನ್.ಪ್ರವೀಣ್, ಎಚ್.ಎನ್.ಪ್ರವೀಣ್, ಕಿರಣ್ ಸೇರಿದಂತೆ ಕಂಪನಿ ಷೇರುದಾರರು, ಎಂಬಿಕೆ ಮತ್ತು ಎಲ್‌ಸಿಆರ್‌ಪಿ ಸಿಬ್ಬಂದಿ ಹಾಜರಿದ್ದರು.