

ಹಾರೂಗೇರಿ: ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೊಸ ಯೋಜನೆ ಜಾರಿಗೆ ತಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಹೇಳಿದರು.
ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗೆ ಮೇಲ್ದರ್ಜೆಗೇರಿಸಿದ ನೂತನ ಕಟ್ಟಡ, ಕುಡಚಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೊರಬ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿಗಳಿಗೆ ನಿರ್ಮಿಸಿದ ವಸತಿ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಇಬ್ಬರು ವೈದ್ಯರು, ಇಬ್ಬರು ನರ್ಸ್ ಮತ್ತು ಅರಿವಳಿಕೆ ತಜ್ಞರು 24 ಗಂಟೆ ಕಾರ್ಯನಿರ್ವಹಿಸಬೇಕು. ಹೃದಯ ಕಾಯಿಲೆ, ಬಿಪಿ, ಶುಗರ್, ಕ್ಯಾನ್ಸರ್ ಸೇರಿ ಇನ್ನುಳಿದ ರೋಗಗಳ ಪತ್ತೆ ಹಚ್ಚುವ ಕಾರ್ಯ ನಡೆಸಿದ್ದೇವೆ. ಈ ನಿಟ್ಟಿನಲ್ಲಿ ಮನೆಮನೆಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ, ಪರೀಕ್ಷೆ ನಡೆಸಲಿದ್ದಾರೆ ಎಂದರು.
ಗೌರವ ಧನ ಹೆಚ್ಚಳ: ಆಶಾ ಕಾರ್ಯಕರ್ತೆಯರಿಗೆ 1,500 ರೂ. ಗೌರವ ಧನ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಬೆಳಗಾವಿ ಜಿಲ್ಲೆಗೆ 300-400 ಕೋಟಿ ರೂ. ಅನುದಾನ ನೀಡಿದೆ ಎಂದರು.
ಶಾಸಕ ಮಹೇಂದ್ರ ತಮ್ಮಣ್ಣವರ ಕುಡಚಿ ಕ್ಷೇತ್ರಕ್ಕೆ ಒಂದು ತಾಯಿ-ಮಕ್ಕಳ ಆಸ್ಪತ್ರೆ ಮಂಜೂರು ಮಾಡಿಸುವಂತೆ ಮನವಿ ಮಾಡಿದರು. ಪುರಸಭೆ ಅಧ್ಯಕ್ಷ ವಸಂತ ಲಾಳಿ, ಮಾಜಿ ಶಾಸಕ ಬಿ.ಸಿ. ಸರಿಕರ, ಹಮಿದೋದ್ದೀನ್ ರೂಹೀಲೆ, ರವಿಶಂಕರ ನರಗಟ್ಟಿ, ಸಿ.ಬಿ.ಕುಲಗೂಡ, ಸಂಜೀವ ಬಾನೆ, ಭೀಮಪ್ಪ ಬದ್ನಿಕಾಯಿ, ಪ್ರದೀಪ ಹಾಲ್ಗುಣಿ, ತಹಸೀಲ್ದಾರ್ ಸುರೇಶ ಮುಂಜೆ, ಚಿಕ್ಕೋಡಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಎಸ್. ಗಡೆದ, ತಾಲೂಕು ವೈದ್ಯಾಧಿಕಾರಿ ಎಸ್.ಎಂ.ಪಾಟೀಲ ಇತರರು ಇದ್ದರು.