ಹಗರಣಗಳಲ್ಲಿ ಸಿಲುಕಿರುವ ಸರ್ಕಾರ : ಶಾಸಕ ಟಿ.ಎಸ್.ಶ್ರೀವತ್ಸ ಆರೋಪ

Published on

ಮೈಸೂರು: ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯ ಅಧೋಗತಿಗೆ ತಲುಪಿದ್ದು, ದಿನ ಬೆಳೆಗಾದರೆ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ನಡೆಯುತ್ತಿದೆ. ಮೈಕ್ರೋ ಫೈನಾನ್ಸ್‌ನಿಂದ ಜನ ತತ್ತರಿಸಿದ್ದರೆ ಸರ್ಕಾರ ಸಾಲು ಸಾಲು ಹಗರಣಗಳಲ್ಲಿ ಸಿಲುಕಿಕೊಂಡಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಟೀಕಿಸಿದರು.

ವಾಲ್ಮೀಕಿ, ಮುಡಾ, ಅಬಕಾರಿ ಇಲಾಖೆ ಹಗರಣದ ಬಳಿಕ ಗುತ್ತಿಗೆದಾರರ ಸಂಘದವರ ಆರೋಪ, ಸಚಿವರು, ಶಾಸಕರು ಮೇಲಿನ ಆರೋಪ ಮಿತಿ ಮೀರಿದೆ. ಕಳೆದ ಒಂದೂವರೆ ವರ್ಷದಿಂದ ತಿಂಗಳಿಗೊಂದು ಹಗರಣ ನಡೆಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ದಿನಬೆಳಗಾದರೆ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ನಡೆಯುತ್ತಿದ್ದು, ಒಂದಲ್ಲ ಒಂದು ಹಗರಣ, ಜನರನ್ನು ನಿದ್ದೆ ಗೆಡಿಸಿದೆ. ಅಭಿವೃದ್ಧಿಗೂ ಹಣ ಇಲ್ಲದಂತಾಗಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಟೀಕಿಸಿದರು.

ನಾಲ್ಕು ಸಾವಿರ ಕೋಟಿ ರೂ. ಸಾಲ ಪಡೆದು ಅದನ್ನು ಪ್ರತಿ ಕ್ಷೇತ್ರಗಳಿಗೆ 10ರಿಂದ 20 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಆದೇಶ ಬಂದಿದ್ದು, ನಗರ ಪ್ರದೇಶಕ್ಕೆ ಹಣ ನೀಡಿಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ಗೃಹ ಇಲಾಖೆ ನಿದ್ದೆ ಮಾಡುತ್ತಿದೆ. ಹಗರಣ, ರಾಬರಿಗಳು ಹೆಚ್ಚಾಗಿವೆ. ದಿನಕ್ಕೊಂದು ಕೊಲೆ, ಅತ್ಯಾಚಾರ, ಡ್ರಗ್ಸ್ ಮಾಫಿಯಾ ನಡೆಯುತ್ತಿದೆ. ರಾಜ್ಯದಲ್ಲಿ ನೆಮ್ಮದಿಯ ವಾತಾವರಣವನ್ನು ಗೃಹ ಸಚಿವರು ನೀಡಿಲ್ಲ. ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು. ಪೊಲೀಸರನ್ನು ರಾಜಕೀಯದಿಂದ ಮುಕ್ತಗೊಳಿಸಬೇಕು ಎಂದರು.

ರಾಜವಂಶಸ್ಥರನ್ನು ನಕಲಿ ಎಂದ ಕಾಂಗ್ರೆಸ್ ವಕ್ತಾರರಿಗೆ ಅಸಲಿ, ನಕಲಿಯ ಸತ್ಯವೇ ಗೊತ್ತಿಲ್ಲ. ರಾಜವಂಶದ ಬಗ್ಗೆ ಮಾಹಿತಿಯೇ ಇಲ್ಲದೆ ಯದುವೀರ್ ಅವರನ್ನು ನಕಲಿ ಎಂದಿದ್ದಾರೆ ಎಂದು ಎಂ.ಲಕ್ಷ್ಮಣ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಮಾತನಾಡಿ, ಕಾಂಗ್ರೆಸ್‌ಗೆ ಕರ್ನಾಟಕವನ್ನು ಒಳ್ಳೆಯ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂದು ಚಿಂತೆಯೇ ಇಲ್ಲ. ದಾವೋಸ್‌ನಲ್ಲಿ ನಡೆದ ಶೃಂಗದಲ್ಲಿ ರಾಜ್ಯ ಭಾಗಿಯಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದರಿಂದ ಬಂಡವಾಳ ಹೂಡಿಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ನೆರೆ ರಾಜ್ಯಗಳಿಗೆ ಹೂಡಿಕೆದಾರರು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಹಣ ಕಟ್ಟಲಾಗದ ಜನರು ಕಿಡ್ನಿ ಮಾಡಿಕೊಳ್ಳುವ ಪರಿಸ್ಥಿತಿ ಕೆಲ ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ. ವಿಚಾರವಾಗಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ರಾಷ್ಟ್ರೀಯ ಕ್ರೈಂ ಬ್ಯೂರೊ ವರದಿಯ ಪ್ರಕಾರ ರಾಜ್ಯದಲ್ಲಿ ಶೇ.56ರಷ್ಟು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಪ್ರತಿದಿನ ನಡೆಯುತ್ತಿರುವ ಕೊಲೆ, ದರೋಡೆ ನೋಡಿದಾಗ ಜನರಿಗೆ ಸರ್ಕಾರ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ನಿಗಮಗಳಿಗೆ ಅನುದಾನ ನೀಡುತ್ತಿಲ್ಲ. ಕೆಲವು ನಿಗಮಗಳಿಗೆ ಅಧ್ಯಕ್ಷರೇ ಇಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಅಧ್ಯಕ್ಷರನ್ನು ನೇಮಿಸಿಲ್ಲ. ಇದಕ್ಕೆ ಸಮುದಾಯಗಳ ಮೇಲಿನ ನಿರಾಸಕ್ತಿ ಕಾರಣ ಎಂದು ದೂರಿದರು.

ನಗರಪಾಲಿಕೆಯಲ್ಲಿ ಇತ್ತೀಚೆಗೆ ಇ-ಖಾತೆ ಕಡ್ಡಾಯ ಮಾಡಲಾಗಿದೆ. ಆದರೆ ಹಳೆಯ ಖಾತೆಯನ್ನು ಇ-ಖಾತೆ ಮಾಡಲು ತೊಂದರೆ ನೀಡಲಾಗುತ್ತಿದೆ. ಮರು ಸರ್ವೇ, ಇ-ಖಾತೆ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುವ ಯತ್ನ ನಡೆಯುತ್ತಿದೆ ಎಂದು ದೂರಿದರು.

ಇ-ಖಾತೆಯನ್ನು ಸರಳೀಕರಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿ ಇರುವ ಖಾತೆಯನ್ನೇ ಬದಲಿಸಲು ಸೂಚಿಸಬೇಕು. ಇಲ್ಲದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಮೋಹನ್, ಶಿವಕುಮಾರ್, ಮಹೇಶ್ ರಾಜ್ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net