ರೈತರಿಗೆ ಗಾಯದ ಮೇಲೆ ಬರೆ ಎಳೆದ ಸರ್ಕಾರ

Published on

ಕಾರಟಗಿ: ಮೊದಲ ಬೆಳೆಗೆ ಅತೀ ಮಳೆ ಹಾಗೂ ರೋಗಗಳ ಕಾರಣದಿಂದ ರೈತರು ಸಾಕಷ್ಟು ನಲುಗಿದ್ದು, ಈಗ ರಾಜ್ಯ ಸರ್ಕಾರ ಜಲಾಶಯಕ್ಕೆ ಗೇಟ್ ಅಳವಡಿಸುವ ನೆಪದಲ್ಲಿ 2ನೇ ಬೆಳೆಯಿಂದ ವಂಚಿಸುವುದನ್ನು ವಿರೋಧಿಸಿ ನ.4ರಂದು ರಸ್ತೆ ತಡೆ ನಡೆಸಲಾಗುವುದು ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ. ತುಂಗಭದ್ರಾ ಜಲಾಶಯಕ್ಕೆ ಗೇಟ್ ಅಳವಡಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಸಾಕಷ್ಟು ಕಾಲಹರಣ ಮಾಡಿದ್ದಾರೆ. ಮೊದಲ ಬೆಳೆ ನಿರೀಕ್ಷೆಯಲ್ಲಿದ್ದ ರೈತರು ಇತ್ತೀಚೆಗೆ ಸುರಿದ ಮಳೆ ಹಾಗೂ ರೋಗಗಳಿಂದ ಬೆಳೆ ಹಾನಿ, ಇಳುವರಿ ಕುಸಿತದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಸಚಿವ ತಂಗಡಗಿ, ಒಂದೇ ಬೆಳೆಗೆ ನೀರು ಹರಿಸುತ್ತಿದ್ದು, ಗೇಟ್ ಅಳವಡಿಸುವುದಾಗಿ ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಒಂದು ತಿಂಗಳಲ್ಲಿ ಪೂರ್ಣಗೊಳ್ಳವ ಕೆಲಸಕ್ಕೆ 8 ತಿಂಗಳು ತೆಗೆದುಕೊಂಡಿದ್ದು, ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ತಿಳಿಯುತ್ತಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ರೈತ ಪರವಾಗಿ ಚಿಂತಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಅಲ್ಲದೇ, ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದ್ದು ಗೇಟ್ ವಿಚಾರದಲ್ಲಿ ಆತಂಕ ಪಡಬೇಕಿಲ್ಲ. ಜಲಾಶಯದಲ್ಲಿ 40ಟಿಎಂಸಿ ನೀರಿದ್ದಾಗಲೂ ಗೇಟ್ ಅಳವಡಿಸಲು ಅವಕಾಶವಿದೆ. ಹೀಗಾಗಿ ಜನವರಿಯಿಂದ ಏ.10ರವರೆಗೆ 2ನೇ ಬೆಳೆಗೆ ನೀರು ಹರಿಸಿ ರೈತರು ಕೃಷಿ ಚಟುವಟಿಕೆ ನಡೆಸಲು ಅವಕಾಶ ನೀಡಬೇಕು. ಏಪ್ರಿಲ್‌ನಿಂದ ಜೂನ್‌ವರೆಗೆ ಗೇಟ್ ಅಳವಡಿಸಬಹುದು. ಹೀಗಾಗಿ ನೀರು ಹರಿಸುವ ಜತೆಗೆ ಗೇಟ್ ಅಳವಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಮುಖಂಡ ಜಿ.ತಿಮ್ಮನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net