ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸದ ಸರ್ಕಾರ : ಅ.27 ರಂದು ರೈತರಿಂದ ರಾಜ್ಯಾದ್ಯಂತ ರಸ್ತೆ ತಡೆ ಚಳವಳಿ

Kuruburu Shantakumar (FILEminimizer)
Published on

ಮೈಸೂರು: ರಾಜ್ಯ ಸರ್ಕಾರ ಕಬ್ಬಿನ ಎಫ್‌ಆರ್‌ಪಿ ದರಕ್ಕೆ ಹೆಚ್ಚುವರಿ ದರ ನಿಗದಿಪಡಿಸಲು ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಅ.27 ರಂದು ರಾಜ್ಯಾದ್ಯಂತ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.

ದರ ನಿಗದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಾಲ್ಕು ಸಭೆಗಳನ್ನು ನಡೆಸಿ ಯಾವುದೇ ತೀರ್ಮಾನ ಕೈಗೊಳ್ಳದೆ ಇರುವುದು ಕಬ್ಬು ಬೆಳೆದ ರೈತರಿಗೆ ಬಗೆದ ದ್ರೋಹವಾಗಿದೆ. ರೈತರು ನಾಲ್ಕು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಯಾವುದೇ ಶಾಸಕರು, ಸಂಸದರು, ಸಚಿವರು ಮಾತನಾಡದೆ ಇರುವುದು ಖಂಡನೀಯ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರು ಇದ್ದು, ಒಟ್ಟು 40,000 ಕೋಟಿ ರೂ. ವಹಿವಾಟು ನಡೆಸುತ್ತಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವ ಈ ಉದ್ಯಮ ಸರ್ಕಾರಕ್ಕೆ ಲಾಭ ತರುತ್ತಿಲ್ಲವೇ? ಕೇವಲ 5000 ಕೋಟಿ ರೂ.ವಹಿವಾಟು ನಡೆಸುವ ಅಡಿಕೆ ಬೆಳೆಗಾರರ ಬಗ್ಗೆ ಕೇಂದ್ರಕ್ಕೆ ನಿಯೋಗ ಹೋಗಿ ಮನವಿ ಮಾಡುವ ರಾಜ್ಯದ ಗೃಹ ಸಚಿವರಿಗೆ ಹಾಗೂ ಎಂಪಿಗಳಿಗೆ ಕಬ್ಬು ಬೆಳೆಗಾರರ ಗೂಳಾಟ ಕಾಣುತ್ತಿಲ್ಲವೇ. ರಾಜ್ಯ ಸರ್ಕಾರ, ಜನಪ್ರತಿನಿಧಿಗಳನ್ನು ಎಚ್ಚರಿಸಲು ಅ.27ರಂದು ರಾಜ್ಯಾದ್ಯಂತ ಬೆಳಗ್ಗೆ 11 ರಿಂದ ಮಧ್ಯಾಹ್ನ 1ರತನಕ ರಸ್ತೆ ತಡೆ ಚಳವಳಿ ಹಾಗೂ ಅ.31ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಪಂಜಾಬ್ ರಾಜ್ಯದಲ್ಲಿ ಟನ್ ಕಬ್ಬಿಗೆ 3800 ರೂ., ಉತ್ತರ ಪ್ರದೇಶದಲ್ಲಿ 3500 ರೂ., ಗುಜರಾತ್‌ನಲ್ಲಿ 4400 ರೂ. ದರ ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಆ ರಾಜ್ಯಗಳಿಂದ ವರದಿ ತರಿಸಿಕೊಂಡಿದ್ದು, ವರದಿಯನ್ನು ಗಮನಿಸಿ ಎಫ್‌ಆರ್‌ಪಿ ದರವನ್ನು ಟನ್‌ಗೆ 3500 ರೂ. ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಗಳು ರೈತರನ್ನು ಸುಲಿಗೆ ಮಾಡುತ್ತಿವೆ. ಕಬ್ಬು ಕಟಾವು 16 ತಿಂಗಳಾಗುತ್ತಿದ್ದು, ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್ ಆಧಾರದ ಮೇಲೆ ದರ ಕಡಿತ ಮಾಡಬೇಕು, ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿ ಕಾರ್ಖಾನೆಗಳ ಮೇಲೆ ವಂಚನೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಉದ್ದಿಮೆ ಸಕ್ಕರೆ ಹಾಗೂ ಕಬ್ಬು ಬೇಸಾಯ ಸಂಪೂರ್ಣವಾಗಿ ಗಣಕೀಕರಣವಾಗಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಎಪ್ರಿಲ್ 26 ರಂದು ಸರ್ಕಾರವನ್ನು ಒತ್ತಾಯಿಸಿತ್ತು. ರೈತ ಮತ್ತು ಕಾರ್ಖಾನೆ ನಡುವೆ ಕಬ್ಬಿನ ನಾಟಿ ಒಪ್ಪಂದ, ಜ್ಯೇಷ್ಠತೆ ಆಧಾರದಲ್ಲಿ ಕಟಾವು ಅನುಮತಿ, ಕಬ್ಬಿನ ತೂಕ, ಕಬ್ಬಿನ ಹಣ ಪಾವತಿ, ಸಕ್ಕರೆ ಇಳುವರಿ ಸೇರಿದಂತೆ ಎಲ್ಲವೂ ಗಣಕೀಕರಣವಾಗಬೇಕು. ರೈತರಿಗೆ ಮೊಬೈಲ್ ಆ್ಯಪ್ ಮೂಲಕ ನೋಂದಾಯಿಸುವ ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ಈ ವ್ಯವಸ್ಥೆ ಜಾರಿಗೆ ಮುಂದಾಗಿರುವುದರಿಂದ ಕಬ್ಬು ಬೆಳೆಗಾರರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪಿ ಸೋಮಶೇಖರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net