ಸರ್ಕಾರದಿಂದ ರಿಯಾಯಿತಿ ದರದಲ್ಲಿ ಕೃಷಿ ಉಪಕರಣ ವಿತರಣೆ

21 sdp 2
Published on

ಸಿದ್ದಾಪುರ: ಕೃಷಿಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅದರಲ್ಲಿ ಮುಖ್ಯವಾಗಿ ಕೂಲಿಕಾರರ ಸಮಸ್ಯೆಯೂ ಇದೆ. ಅದರ ನಿವಾರಣೆಗೆ ಕೃಷಿಯಲ್ಲಿ ಯಂತ್ರೋಪಕರಣ ಬಳಸುವುದಕ್ಕೆ ಸರ್ಕಾರ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಉಪಕರಣ ನೀಡುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಕೃಷಿ ಇಲಾಖೆಯ ಶೇ. 50ರಷ್ಟು ಸಬ್ಸಿಡಿಯೊಂದಿಗೆ ರೈತರಿಗೆ ನೀಡುತ್ತಿರುವ ಭತ್ತ ಕಟಾವು ಯಂತ್ರ ವಿತರಿಸಿ ಅವರು ಮಾತನಾಡಿದರು.

ಸರ್ಕಾರದ ಸಹಾಯಧನದಲ್ಲಿ ಸಲಕರಣೆ ಪಡೆದ ಕೃಷಿಕರು ತಮ್ಮ ಸುತ್ತಲಿನ ರೈತರಿಗೂ ಸಹಾಯ ಮಾಡುವ ಮೂಲಕ ತಾವೂ ಒಂದಿಷ್ಟು ಆದಾಯ ಪಡೆಯಬೇಕು. ಈ ಬಾರಿ ಅತಿಯಾದ ಮಳೆಯಿಂದಾಗಿ ಸಾಕಷ್ಟು ರೈತರಿಗೆ ಹಾನಿಯಾಗಿದೆ. ಸುಮಾರು 4.96 ಲಕ್ಷ .ರೂ. ಹಾನಿಯಾಗಿದೆ ಎಂದು ವರದಿ ಹೇಳುತ್ತದೆ. ಮೊದಲ ಕಂತಿನಲ್ಲಿ 4.05 ಲಕ್ಷ ರೂ. ಪರಿಹಾರ ಬಿಡುಗಡೆಯಾಗಿದೆ ಎಂದರು.

ಫಲಾನುಭವಿ ರೈತರಾದ ಪ್ರಭಾಕರ ಗಣಪತಿ ಗೌಡ ಕೊಡ್ಗಿಬೈಲ್, ಸಣ್ಣಹುಡುಗಿ ಭೈರಾ ನಾಯ್ಕ ಶಿರಳಗಿ, ಬೆಸಮ್ಮ ಗಣಪತಿ ಮಡಿವಾಳ ಜಿಡ್ಡಿ, ಕೃಷ್ಣ ಗಣಪತಿ ನಾಯ್ಕ ಕುಣಜಿ ಹಾಗೂ ಮಂಜುನಾಥ ಲಿಂಗ ನಾಯ್ಕ ಅಳವಳ್ಳಿ ಅವರಿಗೆ ಭತ್ತ ಕಟಾವು ಯಂತ್ರ ವಿತರಿಸಲಾಯಿತು.

ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್.ಎಂ., ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್., ತಾಲೂಕು ಗ್ಯಾರಂಟಿ ಅನುಷ್ಠ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಸಿ.ಆರ್. ನಾಯ್ಕ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net