ಪಾರಂಪರಿಕ ಕಟ್ಟಡ ಮರುನಿರ್ಮಾಣಕ್ಕೆ ಸರ್ಕಾರ ತೀರ್ಮಾನ

lancedown-building
Published on

ಆರ್.ಕೃಷ್ಣ ಮೈಸೂರು
ನಗರದ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್‌ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ, ಮಹಾರಾಣಿ ಕಾಲೇಜು ಕಟ್ಟಡ ಮತ್ತು ಹಾಸ್ಟೆಲ್ ಸೇರಿದಂತೆ ಶಿಥಿಲಗೊಂಡ ಪ್ರಮುಖ 11 ಪಾರಂಪರಿಕ ಕಟ್ಟಡಗಳನ್ನು ಕೆಡವಿ ಮರುನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದೆ.
ಈ ಮೂಲಕ ಹಲವು ವರ್ಷಗಳಿಂದ ತೂಗುಯ್ಯಲೆಯಲ್ಲಿಯೇ ಇದ್ದ ನಗರದ ಪಾರಂಪರಿಕ ಕಟ್ಟಡ ಭವಿಷ್ಯ ಈಗ ನಿರ್ಣಾಯಕ ಘಟ್ಟ ತಲುಪಿದಂತಾಗಿದೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪರಂಪರೆ ಸಮಿತಿಯು 129 ಪಾರಂಪರಿಕ ಕಟ್ಟಡ ರಚನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದು, 11 ಪಾರಂಪರಿಕ ಕಟ್ಟಡಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ಶಿಫಾರಸು ಮಾಡಿದೆ. ವರದಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಮಹಾರಾಣಿ ಕಾಲೇಜು, ಹಾಸ್ಟೆಲ್ ಕಟ್ಟಡ ನೆಲಸಮ ಮಾಡಲು ನಿರ್ಧರಿಸಿದೆ.
ಇದೇ ವೇಳೆ ಕಟ್ಟಡಗಳ ಹೊಸ ರಚನೆಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದೆ. ಶಿಥಿಲಗೊಂಡಿರುವ ಪಾರಂಪರಿಕ ಕಟ್ಟಡಗಳ ಸಮೀಕ್ಷೆ ನಡೆಸಿದ ಪಾರಂಪರಿಕ ಸಮಿತಿಯು ಲ್ಯಾನ್ಸ್‌ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ, ಮಹಾರಾಣಿ ಕಾಲೇಜು ಕಟ್ಟಡ ಮತ್ತು ಹಾಸ್ಟೆಲ್ ಅಲ್ಲದೇ ವಾಣಿ ವಿಲಾಸ ಮಾರುಕಟ್ಟೆ, ಅಠಾರ (ಕಾಡಾ) ಕಚೇರಿ, ಸರಸ್ವತಿಪುರಂನ ಅಗ್ನಿಶಾಮಕ ದಳದ ಕಟ್ಟಡ, ಮಹಾರಾಣಿ ವಿಜ್ಞಾನ ಕಾಲೇಜು, ಬಾಲಕಿಯರ ಸರ್ಕಾರಿ ಶಾಲೆ, ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸಂಗೀತ ವಿವಿ, ಸರ್ಕಾರಿ ಬಾಲ ಗೃಹ, ಮಹಾರಾಜ ಸಂಸ್ಕೃತ ಪಾಠಶಾಲೆ ಕಟ್ಟಡಗಳನ್ನು ತಕ್ಷಣ ಮರುಸ್ಥಾಪನೆ, ಜೀರ್ಣೋದ್ಧಾರ ಮಾಡುವಂತೆ ಶಿಫಾರಸು ಮಾಡಲಾಗಿದೆ.
ಈ 11 ರಚನೆಗಳ ಜೀರ್ಣೋದ್ಧಾರಕ್ಕೆ 96,80,59,838 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. ಪಾರಂಪರಿಕ ಸಮಿತಿ ಸದಸ್ಯರಾದ ಪ್ರೊ.ರಂಗರಾಜು ಅವರು ಪಾರಂಪರಿಕ ಕಟ್ಟಡಗಳ ಸ್ಥಿತಿಗತಿಯ ವರದಿಯ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ.
ವರದಿ ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಾಣಿ ವಿಲಾಸ ಮಾರುಕಟ್ಟೆ ಮತ್ತು ಮಂಡಿ ಮೊಹಲ್ಲಾದ ಚಿಕ್ಕ ಮಾರುಕಟ್ಟೆಯ ಸ್ಥಿತಿಗತಿ ಕುರಿತು ಪ್ರಶ್ನಿಸಿದರು. ಅಲ್ಲದೇ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ, ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಹಾಸ್ಟೆಲ್ ಅನ್ನು ನೆಲಸಮಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ಆರ್ಥಿಕ ವರ್ಷದಲ್ಲಿ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇದೇ ರೀತಿಯ ರಚನೆಯನ್ನು ಕಾಪಾಡಿಕೊಳ್ಳಲು ಮತ್ತು ಪಾರಂಪರಿಕ ನೋಟವನ್ನು ಉಳಿಸಿಕೊಳ್ಳಲು ಸರ್ಕಾರ ಬಯಸಿದೆ. ಆದರೆ ವ್ಯಾಪಾರಸ್ಥರು ಮತ್ತು ಮಾರುಕಟ್ಟೆಗೆ ಭೇಟಿ ನೀಡುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಪರಿಗಣಿಸಿ ಹೊಸ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಮುಂದಿನ ನಾಲ್ಕು ವರ್ಷಗಳಲ್ಲಿ ಅನೇಕ ಪಾರಂಪರಿಕ ಕಟ್ಟಡಗಳನ್ನು ಮರುಸ್ಥಾಪಿಸಲಾಗುವುದು, ಇವುಗಳಿಗೆ ಹಂತ, ಹಂತವಾಗಿ ಹಣವನ್ನು ಮಂಜೂರು ಮಾಡಲಾಗುವುದು, ಯಾವುದೇ ಸರ್ಕಾರವು ಒಂದೇ ಬಾರಿಗೆ 100 ಕೋಟಿ ರೂ.ಗಳನ್ನು ಮೀಸಲಿಡುವುದು ಕಷ್ಟಕರವಾಗುತ್ತದೆ, ಸರ್ಕಾರಕ್ಕೂ ಹಲವಾರು ಆದ್ಯತೆಗಳಿವೆ. ಹಾಗಾಗಿ ಹಂತ, ಹಂತವಾಗಿ ಹಣ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಕುಸಿದಿದ್ದ ಪಾರಂಪರಿಕ ಕಟ್ಟಡಗಳು:
ನಗರದ ಹೃದಯ ಭಾಗದಲ್ಲಿರುವ 125 ವರ್ಷಗಳ ಇತಿಹಾಸವುಳ್ಳ ದೇವರಾಜ ಮಾರುಕಟ್ಟೆ ಸದಾಕಾಲ ಜನರಿಂದ ತುಂಬಿರುತ್ತದೆ. ಇದು ಪಾರಂಪರಿಕ ಕಟ್ಟಡವೂ ಹೌದು. ಇಲ್ಲಿಯವರೆಗೆ ಎರಡು ಬಾರಿ ಕಟ್ಟಡದ ಛಾವಣಿ ಕುಸಿದಿದೆ.
2005ರಲ್ಲಿ ಸಯ್ಯಜಿರಾವ್ ರಸ್ತೆಗೆ ಮುಖ ಮಾಡಿರುವ ಪೂರ್ವ ಭಾಗದ ಎರಡು ಮಳಿಗೆಗಳ ಛಾವಣಿ ಕುಸಿದಿತ್ತು, ಬಳಿಕ 2016 ರಲ್ಲಿ ಮಾರುಕಟ್ಟೆಯ ಉತ್ತರ ಪ್ರವೇಶದ್ವಾರದ, ಧನ್ವಂತರಿ ರಸ್ತೆಯಿಂದ ಮಾರುಕಟ್ಟೆ ಪ್ರವೇಶಿಸುವ ದ್ವಾರದ ಒಳಭಾಗದಲ್ಲಿ ಕಟ್ಟಡ ಕುಸಿದಿತ್ತು.
ಮಾರುಕಟ್ಟೆಯಲ್ಲಿ ಒಟ್ಟು 822 ಮಳಿಗೆಗಳಿದ್ದು, 250 ತೆರೆದ ಮಳಿಗೆಗಳಿವೆ, ಒಟ್ಟು 1072 ವ್ಯಾಪಾರಸ್ಥರು ಇದ್ದಾರೆ. ಮಾರುಕಟ್ಟೆಯೂ ಶಿಥಿಲಗೊಂಡಿರುವುದರಿಂದ ಒಡೆದು ಕಟ್ಟಬೇಕು. ಅಲ್ಲದೇ ಆಗಾಗ್ಗೆ ಮಾರುಕಟ್ಟೆಯಲ್ಲಿ ಬೆಂಕಿ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.ಬ್ರಿಟಿಷರ ಕಾಲದಲ್ಲಿ ಕಟ್ಟಲಾಗಿದ್ದ ಅತ್ಯಂತ ಹಳೆಯ ಕಟ್ಟಡಗಳಲ್ಲೊಂದಾದ ಲೌನ್ಸ್‌ಡೌನ್ ಬಿಲ್ಡಿಂಗ್ 2012ರಲ್ಲಿ ಛಾವಣಿ ಕುಸಿದು ನಾಲ್ವರು ಮೃತಪಟ್ಟಿದ್ದರು. 12 ವರ್ಷದಿಂದ ಕಟ್ಟಡದಲ್ಲಿದ್ದವರನ್ನು ತೆರವುಗೊಳಿಸಲಾಗಿದೆ. ಕಟ್ಟಡ ದುರಸ್ತಿಗೊಳಿಸಬೇಕೆ ಅಥವಾ ಮರುನಿರ್ಮಿಸಬೇಕೆ ಎನ್ನುವ ಗೊಂದಲವೇ ಮುಂದುವರಿದಿತ್ತು. ಈಗ ಸರ್ಕಾರ ಮರುನಿರ್ಮಿಸಲು ಮುಂದಾಗಿದೆ.

ದೇವರಾಜ ಮಾರುಕಟ್ಟೆ ನೆಲಸಮಕ್ಕೆ ವಿರೋಧ
ಮಾರುಕಟ್ಟೆ ಸುತ್ತ ಮಾತ್ರ ಕಟ್ಟಡವಿದೆ. ಒಳಗೆ ಕಲ್ನಾರ್ ಶೀಟಿನ ಅಂಗಡಿಗಳು ಇರುವುದರಿಂದ ದೇವರಾಜ ಮಾರುಕಟ್ಟೆ ಕೆಡವಬಾರದು ಎಂದು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಕಲ್ನಾರ್ ಶೀಟ್‌ನಿಂದ ಯಾರಿಗೂ ಅಪಾಯವಿಲ್ಲ. ಎರಡು ಕಡೆ ಕುಸಿದಿರುವುದನ್ನು ಭಾಗ ನವೀಕರಣ ಮಾಡಲು ನಮ್ಮ ಅಭ್ಯಂತರವಿಲ್ಲ. ಏಕಾಏಕಿ ಇಡೀ ಮಾರುಕಟ್ಟೆ ಕಟ್ಟಡ ಕೆಡವಲು ಮುಂದಾದರೆ ಸಾವಿರಾರು ವ್ಯಾಪಾರಸ್ಥರು ಬೀದಿ ಪಾಲಾಗುತ್ತಾರೆ.
ಎಸ್.ಮಹದೇವು, ಅಧ್ಯಕ್ಷ, ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಸಂಘ

ಹಲವು ಕಟ್ಟಡ ಸುಸ್ಥಿತಿಯಲ್ಲಿ ಇಲ್ಲ
ವರದಿಯ ಪ್ರಕಾರ ಲಾನ್ಸ್‌ಡೌನ್, ದೇವರಾಜ ಮಾರುಕಟ್ಟೆ ಸೇರಿದಂತೆ 11 ಪಾರಂಪರಿಕ ಕಟ್ಟಡಗಳು ಸುಸ್ಥಿತಿಯಲ್ಲಿ ಇಲ್ಲ. ಅವುಗಳನ್ನು ನವೀಕರಣ ಮಾಡಿದರೂ ಮುಂದೆ ದೀರ್ಘಕಾಲ ಬಾಳಿಕೆ ಕಷ್ಟ. ಹಾಗಾಗಿ ಮರುನಿರ್ಮಾಣಕ್ಕೆ ವರದಿ ಸಲ್ಲಿಸಲಾಗಿದೆ.
ಪ್ರೊ.ಎನ್.ಎಸ್.ರಂಗರಾಜು
ಸದಸ್ಯ ಪರಂಪರೆ ಸಂರಕ್ಷಣಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net