ಸರ್ಕಾರದ ನಿರ್ಣಯ ಖಂಡನೀಯ

1 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿಶ್ವ ವಿದ್ಯಾಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರದಿರಲಿ ಎಂಬ ಕಾರಣಕ್ಕೆ ಅವುಗಳನ್ನು ದೇಶದಾದ್ಯಂತ ಸ್ವಾಯತ್ತ ಸಂಸ್ಥೆಗಳನ್ನಾಗಿ ರೂಪಿಸಲಾಗಿದೆ. ಈ ತತ್ವಕ್ಕೆ ವಿರೋಧವಾಗಿ ಸರ್ಕಾರ ಗ್ರಾಮೀಣಾಭಿವೃದ್ಧಿ ಪಂಚಾಯತ್​ರಾಜ್​ ವಿಶ್ವ ವಿದ್ಯಾಲಯದ ಕುಲಾಧಿಪತಿ ಸ್ಥಾನಕ್ಕೆ ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಯನ್ನು ನೇಮಕ ಮಾಡಲು ಸಚಿವ ಸಂಪುಟದ ಸಭೆಯಲ್ಲಿ ಇತ್ತೀಚೆಗೆ ನಿರ್ಣಯಿಸಿದ್ದು ಖಂಡನೀಯ. ಇದೊಂದು ದುರ್ದೈವದ ಸಂಗತಿ ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಶ್ವ ವಿದ್ಯಾಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ ಆಗುವುದರಿಂದ ಶೈಕ್ಷಣಿಕ ವ್ಯವಸ್ಥೆ ಹಾಳಾಗಿ ಅಧೋಗತಿ ತಲುಪುವ ಸಾಧ್ಯತೆಗಳಿವೆ. ಹೀಗಾಗಿ ಈ ನಿರ್ಣಯ ಕೈ ಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಯನ್ನು ಕುಲಾಧಿಪತಿಯಾಗಿ ಮಾಡುವುದರಿಂದ ಅತಿ ವೇಗದಲ್ಲಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿದೆ ಎಂದು ಸರ್ಕಾರ ಹೇಳಿಕೆ ನೀಡಿದ್ದು ಹಾಸ್ಯಾಸ್ಪದ. ಮುಖ್ಯಮಂತ್ರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕಾರ್ಯದ ಒತ್ತಡ ಹೆಚ್ಚು ಇರುವುದರಿಂದ ಮತ್ತಷ್ಟು ವಿಳಂಬ ಆಗುವುದೇ ಹೊರತು ವೇಗವಾಗಿ ಕಾರ್ಯಗಳು ಆಗುವುದಿಲ್ಲ.

ರಾಜ್ಯದ 6 ವಿಶ್ವ ವಿದ್ಯಾಲಯಗಳಲ್ಲಿ ಕುಲಪತಿಗಳ ಸ್ಥಾನ ಕಳೆದ 7-8 ತಿಂಗಳಿಂದ ಖಾಲಿ ಇದ್ದು, ಸರ್ಕಾರ ನೇಮಕಕ್ಕೆ ಶೋಧನಾ ಸಮಿತಿ ಸಹ ರಚನೆ ಮಾಡಿಲ್ಲ. ಈ ವಿಳಂಬಕ್ಕೆ ಸರ್ಕಾರವೇ ಹೊಣೆ ಆಗಿದೆ. ಹೀಗಿರುವಾಗ ಕಾನೂನು ಮತ್ತು ಸಂಸದೀಯ ಸಚಿವ ಎಚ್​.ಕೆ. ಪಾಟೀಲ ಅವರು ಯಾವ ಕಾರಣಕ್ಕೆ ಕುಲಾಧಿಪತಿಗಳ ಅಧಿಕಾರವನ್ನು ತರಾತುರಿಯಲ್ಲಿ ಮುಖ್ಯಮಂತ್ರಿಗೆ ಹಸ್ತಾಂತರಿಸುವ ಕ್ರಮಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಎನ್ನುವುದು ಪ್ರಶ್ನೆ ಆಗಿದೆ. ಇದರ ಹಿಂದೆ ಇರುವ ಉದ್ದೇಶ ಅರ್ಥವಾಗುತ್ತಿಲ್ಲ ಎಂದು ಸಂಕನೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net