ಭತ್ತ ಬೆಳೆದ ರೈತರಿಗೆ ಸರ್ಕಾರದ ಷರತ್ತುಗಳೇ ಕುತ್ತು

Paddy
Published on

| ವಿಲಾಸ ಮೇಲಗಿರಿ ಬೆಂಗಳೂರು

ಕೇಂದ್ರ ಸರ್ಕಾರ ಭತ್ತ ಸಹಿತ 23 ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಹಲವು ನಿಯಮ, ಷರತ್ತುಗಳಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಶಿವಮೊಗ್ಗ, ರಾಯಚೂರು ಬಳ್ಳಾರಿ, ದಾವಣಗೆರೆ, ಮೈಸೂರು, ಮಂಡ್ಯ, ಗದಗ, ಧಾರವಾಡ ಸೇರಿ ರಾಜ್ಯದ 12 ಜಿಲ್ಲೆಗಳಲ್ಲಿ ರೈತರು ಪ್ರಮುಖ ಬೆಳೆಯಾಗಿ ಭತ್ತ ಬೆಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಗುಣಮಟ್ಟದ ಭತ್ತಕ್ಕೆ ಪ್ರತಿ ಕ್ವಿಂಟಲ್​ಗೆ 1886 ರೂ. ಬೆಂಬಲ ಬೆಲೆ ನಿಗದಿಪಡಿಸಿದರೂ ಸರ್ಕಾರದ ಎಡವಟ್ಟು ನಿರ್ಧಾರಗಳಿಂದ ರೈತನಿಗೆ ನಿರೀಕ್ಷಿತ ಫಲ ಸಿಗುತ್ತಿಲ್ಲ.

ಸರ್ಕಾರ ಭತ್ತ ಬೆಳೆದ ರೈತರ ನೋಂದಣಿ ಆರಂಭಿಸಿ, ಖರೀದಿ ಪ್ರಾರಂಭಿಸುವ ವೇಳೆಗೆ ಸಣ್ಣ ಮತ್ತು ಮಧ್ಯಮ ರೈತರು ಬೆಳೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕೈಗೆ ಸಿಕ್ಕ ದರಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ. ಈ ಮೊದಲು ಸರ್ಕಾರವೇ ಖರೀದಿ ಕೇಂದ್ರ ಆರಂಭಿಸಿ ಖರೀದಿಸುತ್ತಿತ್ತು. ಆದರೆ, ಈಗ ರೈತರ ಹೆಸರ ನೋಂದಣಿ ಮಾಡಿಕೊಂಡು ಎಸ್​ಎಂಎಸ್ ಮೂಲಕ ಸಮೀಪದ ಅಕ್ಕಿ ಗಿರಣಿಗೆ ಕೊಡಲು ಹೇಳುತ್ತಾರೆ. ಇದರಿಂದ ರೈತರು ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಆರ್.ಟಿ.ಸಿ.ಯಲ್ಲಿ ಭತ್ತ ಬಿತ್ತನೆ ದಾಖಲಾಗಿರಬೇಕು. ಆಗ ಮಾತ್ರ ರೈತ ಭತ್ತವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯ. ಪ್ರಸಕ್ತ ಸಾಲಿನ ಆರ್.ಟಿ.ಸಿ.ಯಲ್ಲಿ ಭತ್ತ ನಮೂದಾಗಿರದೇ ಇದ್ದರೆ ಮಾರಾಟಕ್ಕೆ ಅವಕಾಶವಿಲ್ಲ.

ಹಣ ಕೈಸೇರಲು 2-3 ತಿಂಗಳು ಬೇಕು: ಭತ್ತ ಮಾರಾಟ ಮಾಡಿದರೆ ತಕ್ಷಣಕ್ಕೆ ಹಣ ರೈತನ ಕೈ ಸೇರುವುದಿಲ್ಲ. ಕೆಲವು ಗಿರಣಿ ಮಾಲೀಕರು 2-3 ತಿಂಗಳು ರೈತರನ್ನು ಸತಾಯಿಸುತ್ತಾರೆ. ಸಾಲ ಮಾಡಿ ಭತ್ತ ಬೆಳೆದ ರೈತ ಸಾಲದ ಬಾಧೆ ಅನುಭವಿಸುತ್ತಾನೆ.

ಈ ಬಾರಿ ಭತ್ತ ಖರೀದಿ ತಡವಾಯಿತು. ಅರ್ಧಕ್ಕಿಂತ ಹೆಚ್ಚು ರೈತರು ತಮ್ಮ ಉತ್ಪನ್ನವನ್ನು ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡ ಕೂಡಲೇ ಸರ್ಕಾರ ಮಧ್ಯಪ್ರವೇಶಿಸುವ ವ್ಯವಸ್ಥೆ ಜಾರಿಗೆ ತರಬೇಕು. ಎಪಿಎಂಸಿಗಳಲ್ಲಿ ರೈತನ ಭತ್ತ ದಾಸ್ತಾನು ಇರಿಸಿಕೊಂಡು ಬಡ್ಡಿ ರಹಿತ ಸಾಲ ಕೊಡಬೇಕು. | ಎಚ್.ಎಂ. ತಿಪ್ಪೇರುದ್ರಸ್ವಾಮಿ ಅಧ್ಯಕ್ಷರು, ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರ ನಿಗಮ.

ಗಿರಣಿಗಳಿಗೆ ಬಂಪರ್!

ಸರ್ಕಾರ ಅಕ್ಕಿ ಗಿರಣಿ ಮೂಲಕ ಭತ್ತ ಖರೀದಿ ಮಾಡುತ್ತಿರುವುದರಿಂದ ಕೆಲವು ಗಿರಣಿ ಮಾಲೀಕರು ಲಾಭ ಮಾಡಿಕೊಳ್ಳುತ್ತಾರೆ. ರೈತರ ಮಾಲನ್ನು ಪಡೆದು ಬಿಲ್ ಹಾಕಿದ ಬಳಿಕ 2-3 ತಿಂಗಳ ತರುವಾಯ ಹಣ ಪಾವತಿ ಮಾಡುತ್ತಾರೆ. ಇದರಿಂದ ತಮಗಿಂತ ಗಿರಣಿಗಳ ಮಾಲೀಕರಿಗೇ ಹೆಚ್ಚು ಲಾಭವಾಗುತ್ತದೆ ಎಂದು ರೈತರು ಹೇಳುತ್ತಾರೆ.ಎಪಿಎಂಸಿಗಳಲ್ಲಿ ಭತ್ತವನ್ನು ಅಡಮಾನ ಇಟ್ಟುಕೊಂಡು ಬಡ್ಡಿ ರಹಿತ ಸಾಲ ಕೊಡಬೇಕು. ಗೋದಾಮಿಗೆ ಒಂದು ತಿಂಗಳವರೆಗೆ ಬಾಡಿಗೆ ವಿಧಿಸಬಾರದು. ರೈತ ಗಿರಣಿಗೆ ಮಾಲು ಬಿಟ್ಟ ಕೂಡಲೇ ಕ್ಯಾಷ್ ಆಂಡ್ ಕ್ಯಾರಿ ವ್ಯವಸ್ಥೆ ಮಾಡಬೇಕು ಎಂಬುದು ರೈತರ ಪ್ರಮುಖ ಒತ್ತಾಯಗಳು.

ರೈತರ ಬೇಡಿಕೆ ಏನು?

  • ರೈತರ ಉತ್ಪನ್ನ ಕಟಾವಿಗೆ ಬರುವ ಮುನ್ನವೇ ನೋಂದಣಿ ಆರಂಭಿಸಿ, ಬೆಳೆ ಬಂದ ಕೂಡಲೆ ಖರೀದಿ ಶುರು ಮಾಡಬೇಕು.
  • ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ಸ್ಥಾಪಿಸಬೇಕು.
  • ಎಲ್ಲ ತಳಿ ಭತ್ತವನ್ನೂ ಖರೀದಿಸಬೇಕು.
  • ಸ್ಥಳದಲ್ಲೇ ಮಾದರಿ ಪರೀಕ್ಷಿಸಿ ಖರೀದಿಸಬೇಕು.
  • ರೈತರಿಗೆ 1 ವಾರದಿಂದ 10 ದಿನದ ಒಳಗೆ ಹಣ ಸಂದಾಯವಾಗಬೇಕು.
  • ರೈತರಿಗೆ ಗೋಣಿ ಚೀಲ ಮತ್ತು ಸಾಗಣೆ ವ್ಯವಸ್ಥೆ ಮಾಡಬೇಕು.
  • ತೂಕದಲ್ಲಿ ಮೋಸವಾಗದಂತೆ ಎಚ್ಚರವಹಿಸಬೇಕು.
  • ಖರೀದಿ ಅವಧಿ ವಿಸ್ತರಿಸಬೇಕು.

ಗಿರಣಿಯಲ್ಲಿ ರೈತರ ಗಿರಕಿ

ಗಿರಣಿಗೆ ಭತ್ತ ತರಲು ಗೋಣಿ ಚೀಲಕ್ಕಾಗಿ ರೈತರು 15-20 ರೂ. ತೆರಬೇಕು. ಸರ್ಕಾರ ರೈತರಿಗೆ 6 ರೂ. ಮಾತ್ರ ಕೊಡುತ್ತದೆ. ಭತ್ತ ತಂದ ಮೇಲೆ ತೇವಾಂಶದ ಹೆಸರಿನಲ್ಲಿ ತೂಕದಲ್ಲಿ ಮೋಸ ಮಾಡುತ್ತಾರೆ. ತೇವಾಂಶದ ನೆಪದಲ್ಲಿ ಒಂದೊಂದು ಮಿಲ್​ನವರು ಒಂದೊಂದು ರೀತಿ ಭತ್ತದ ತೂಕದಲ್ಲಿ ಕಡಿತ ಮಾಡುತ್ತಾರೆ. ಕೆಲವರು ಕ್ವಿಂಟಲ್​ಗೆ 2/3 ಕೆಜಿವರೆಗೆ ಕಡಿತ ಮಾಡಿದ ಉದಾಹರಣೆಗಳೂ ಇವೆ ಎನ್ನುತ್ತಾರೆ ರೈತರು. ಕೆಲವು ಗಿರಣಿ ಮಾಲೀಕರು ಭತ್ತ ಗುಣಮಟ್ಟದ್ದಲ್ಲ ಎಂದು ವಾಪಸ್ ಕಳುಹಿಸುತ್ತಾರೆ. ಆಗ ಸಾಗಣೆ ಹೊರೆ ರೈತನ ಮೇಲೆ ಬೀಳುತ್ತದೆ. ರೈತರು ಸಾಕಷ್ಟು ಪ್ರಮಾಣದಲ್ಲಿ ಜ್ಯೋತಿ ಭತ್ತವನ್ನು ಬೆಳೆದಿದ್ದಾರೆ. ಆದರೆ, ಸರ್ಕಾರ ಜ್ಯೋತಿ ಭತ್ತ ಖರೀದಿ ಮಾಡುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಈ ತಳಿ ಭತ್ತದ ಬೆಳೆ ಪಾತಾಳಕ್ಕೆ ಕುಸಿದಿದೆ ಎಂಬುದು ರೈತರ ಅಳಲು.

ತೂಕದಲ್ಲಿ ಮೋಸ?

ಭತ್ತದ ತೇವಾಂಶ ಕರಾರುವಕ್ಕಾಗಿ ತಿಳಿಯುವುದಿಲ್ಲ. ನಿಯಮದಂತೆ ಭತ್ತ ಒಣಗಿಸುವ ಪರಿಸ್ಥಿತಿ ಕೂಡ ರೈತನಿಗೆ ಇರುವುದಿಲ್ಲ. ಕಾರಣ ಭತ್ತ ಗಿರಣಿಗೆ ತಂದಾಗ ತೇವಾಂಶದ ಹೆಸರಿನಲ್ಲಿ, ತೂಕದಲ್ಲಿ ಮೋಸವಾಗುತ್ತದೆ ಎಂಬುದು ರೈತರ ದೂರು. ತೇವಾಂಶ, ಜಳ್ಳು, ಚೀಲದ ತೂಕ ಸೇರಿ ಕೆಲವು ಗಿರಣಿ ಮಾಲೀಕರು ಮನಸ್ಸಿಗೆ ಬಂದಂತೆ ತೂಕ ಕಡಿತ ಮಾಡುತ್ತಾರೆ. ದಲ್ಲಾಳಿಗಳಾದರೆ ಗೋಣಿ ಚೀಲ ಒದಗಿಸುತ್ತಾರೆ. ತಮ್ಮ ಹಮಾಲಿಗಳನ್ನೇ ಕಳಿಸಿ ಲೋಡ್ ಮತ್ತು ಅನ್​ಲೋಡ್ ಮಾಡಿಸುತ್ತಾರೆ. ಜತೆಗೆ ಸಾಗಣೆ ಜವಾಬ್ದಾರಿ ಹೊರುತ್ತಾರೆ. ಆದರೆ, ಸರ್ಕಾರಿ ವ್ಯವಸ್ಥೆಯಲ್ಲಿ ಗಿರಣಿಗಳಲ್ಲಿ ಅನ್​ಲೋಡ್ ಹೊರತುಪಡಿಸಿ ಎಲ್ಲ ಹೊಣೆಯನ್ನೂ ರೈತನೇ ಹೊರಬೇಕಾಗಿದೆ ಎಂಬುದು ಬಹುತೇಕ ರೈತರ ಅಳಲು.

ಭತ್ತ ಖರೀದಿಗೆ ವಿಧಿಸಿರುವ ಷರತ್ತುಗಳನ್ನು ಸಡಿಲಿಸಬೇಕು. ಜ್ಯೋತಿ ಭತ್ತ ಖರೀದಿಸಬೇಕು. ರೈತನ ಉತ್ಪನ್ನ ಇರುವ ಸ್ಥಳಕ್ಕೆ ಬಂದು ತೇವಾಂಶ ಪರೀಕ್ಷಿಸಿ ಖರೀದಿಸಬೇಕು. ತಕ್ಷಣ ಹಣ ಪಾವತಿಸಬೇಕು. | ದೊಡ್ಡಪ್ಪ ದೇಸಾಯಿ ಪ್ರಗತಿಪರ ರೈತ, ಹಗೇದಾಳು, ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net