

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಇಲ್ಲಿಯ ಅಮರಗೋಳದ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಿದ್ದು, ಅಗತ್ಯ ಅನುದಾನ ಕೊಡಿಸಲಾಗುವುದು ಎಂದು ಶಾಸಕ, ಕರ್ನಾಟಕ ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿಯ ಅಮರಗೋಳದ ಎಪಿಎಂಸಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಹೂವಿನ ಮಾರುಕಟ್ಟೆ ಮತ್ತು ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಷ್ಟೇ ಅಲ್ಲ, ಸುತ್ತಲಿನ ಹತ್ತಾರು ಜಿಲ್ಲೆಯ ರೈತರು ಹುಬ್ಬಳ್ಳಿ ಎಪಿಎಂಸಿಯನ್ನು ಅವಲಂಬಿಸಿದ್ದಾರೆ. ವರ್ತಕರು ಮತ್ತು ರೈತರಿಂದ ಎಪಿಎಂಸಿ ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರುಗಳು ಬಂದಿವೆ. ರೈತ ಭವನ ಅಸಮರ್ಪಕ ನಿರ್ವಹಣೆ ಬಗ್ಗೆ ಪ್ರತಿಕೆಗಳಲ್ಲಿ ವರದಿಯಾಗುತ್ತಿವೆ. ಅಧಿಕಾರಿಗಳು ಮಾತ್ರ ಕಣ್ಣು, ಕಿವಿ ಮುಚ್ಚಿ ಕುಳಿತಂತಿದೆ. ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ಅನುಷ್ಠಾನ ಮಾಡುವುದನ್ನು ಬಿಡಬೇಕು. ಸಮರ್ಪಕ ಮತ್ತು ದೂರದೃಷ್ಟಿ ಇಟ್ಟುಕೊಂಡು ಯೋಜನಾ ವರದಿ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.
ಎಪಿಎಂಸಿಯಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳ ಕುರಿತು ರ್ಚಚಿಸಲು ಶೀಘ್ರದಲ್ಲೇ ಕೃಷಿ ಸಚಿವರೊಂದಿಗೆ ಭೇಟಿ ನೀಡುವ ಉದ್ದೇಶವಿದೆ. ಜುಲೈ ಎರಡನೇ ವಾರದಲ್ಲಿ ಕೃಷಿ ಸಚಿವರು ಹುಬ್ಬಳ್ಳಿ ಎಪಿಎಂಸಿಗೆ ಭೇಟಿ ನೀಡಿ ಅವಲೋಕನ ಮಾಡಲಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಅತೀ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿಯಲ್ಲಿ ಇಂಥ ವಿಶಾಲ ಎಪಿಎಂಸಿಯಲ್ಲಿ ಹೂವಿನ ಮಾರುಕಟ್ಟೆಗೆ ಸ್ಥಳಾವಕಾಶ ನೀಡಿದ್ದು, ಅತ್ಯಂತ ಸಂತಸ ಮತ್ತು ಪ್ರಸ್ತುತವಾಗಿದೆ. ಈಗಿರುವ ಹುಬ್ಬಳ್ಳಿ ದುರ್ಗದಬೈಲ್ ಹೂವಿನ ಮಾರುಕಟ್ಟೆಯಲ್ಲಿ ಸಗಟು ಮಾರಾಟ ಅಸಾಧ್ಯವಾದ ಮಾತಾಗಿದೆ ಎಂದರು.
ಎಪಿಎಂಸಿ ಕಾರ್ಯದರ್ಶಿ ಮೇರುನಂದನ್, ಹುಬ್ಬಳ್ಳಿ ಫ್ಲವರ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಖಾದರ್ ಅತ್ತಾರ, ಉಪಾಧ್ಯಕ್ಷ ಅಬ್ದುಲ್ ಖಾದರ್ ಮುಜಾವರ್, ಯೂಸೂಫ್ ಶಿರಹಟ್ಟಿ, ಆರೀಫ್ ಮುಜಾವರ್, ಜಿ.ಎಲ್. ಲದ್ವಾ, ಮುಷ್ತಾಕ್ ಪಾಟೀಲ, ಎಂ.ಜಿ. ಅತ್ತಾರ, ಇರ್ಫಾನ ಮುಜಾವರ್ ಅನೇಕರಿದ್ದರು.