

ಹುನಗುಂದ: ಚಿತ್ತವಾಡಗಿ ಕೆರೆ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಿಗೆ ಶಾಶ್ವತ ನೀರಾವರಿ ಕಲ್ಪಿಸಿವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ತಾಲೂಕಿನ ನಾಗೂರ ಗ್ರಾಮದಲ್ಲಿ ಭಾನುವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಕೆರೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಿ.ಎಂ. ನಾಡಗೌಡರು ನಿರ್ಮಿಸಿದ ಚಿತ್ತವಾಡಗಿ ಕೆರೆಯೂ ನೀರು ತುಂಬುವ ಯೋಜನೆಗೆ ಒಳಪಟ್ಟಿರುವುದರಿಂದ ವರ್ಷ ಪೂರ್ತಿ ನೀರಿನ ಲಭ್ಯವಾಗಲಿದೆ. ರೈತರ ಅನುಕೂಲಕ್ಕಾಗಿ ಕಾಲುವೆ ದುರಸ್ತಿ, ಹೂಳು ತೆಗೆಯುವುದು ಸೇರಿ ಇನ್ನಿತರ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಎಇಇ ಪ್ರಕಾಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, 1972ರಲ್ಲಿ ನಿರ್ಮಿಸಲಾದ ಚಿತ್ತವಾಡಿಗೆ ಕೆರೆಯೂ ಒಟ್ಟು 890 ಹೆಕ್ಟೇರ್ ಪ್ರದೇಶದ ವ್ಯಾಪ್ತಿ ಹೊಂದಿದ್ದು, ಕಳೆದ 8-10 ವರ್ಷಗಳಿಂದ ಕಾಲುವೆ ದುರಸ್ತಿ ಮಾಡದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಕಾಲುವೆ ದುರಸ್ತಿಗೆ ಶಾಸಕರು ಮುತುವರ್ಜಿವಹಿಸಿ 50 ಲಕ್ಷ ರೂ. ಮಂಜೂರು ಮಾಡಿಸಿದ್ದು, ಆ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುತ್ತಣ್ಣ ಕಲಗೋಡಿ ಗ್ರಾಮ ಪಂಚಾಯಿತ ಅಧ್ಯಕ್ಷ ಹುಲಗವ್ವ ಮಾದರ, ಮುಖಂಡರಾದ ಗುರುನಗೌಡ ಪಾಟೀಲ, ವೀರನಗೌಡ ಮೇಟಿ, ಶರಣಗೌಡ ಅರಸಿಬಿಡಿ, ಮಹಾಂತೇಶ ನಾಡಗೌಡ್ರ, ಬಸಪ್ಪ ಬೀಳಗಿ, ಆದನಗೌಡ ಪಾಟೀಲ, ಬಸವರಾಜ ಹೊಸಮನಿ, ಈರಪ್ಪ ಅಂಬಿಗೇರ, ಗುತ್ತಿಗೇದಾರ ಉಮೇಶ ಕಡೇಮನಿ, ಶ್ರೀನಿವಾಸ ಮೇಟಿ ಇತರರಿದ್ದರು.