ಸರ್ಕಾರಿ ಕಾಲೇಜುಗಳಿಗೆ ಬೇಕಿದೆ ಕಾಯಕಲ್ಪ

klr
Published on

ಲಕ್ಕೂರು: ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಅಸಡ್ಡೆಯೋ, ಪ್ರಾಂಶುಪಾಲರ ರ್ನಿಲಕ್ಷ$್ಯವೋ, ಪಾಲಕರ ಅಸಮಾಧಾನವೋ ಗೊತ್ತಿ, ಆದರೆ ತಾಲೂಕಿನಲ್ಲಿರುವ ಸರ್ಕಾರಿ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಕಡಗಣನೆಯಾಗಿದೆ. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿದ್ದು ಗ್ರಾಮಾಂತರದ ಕಾಲೇಜುಗಳು ಕಣ್ಮರೆಯಾಗುವ ಹಂತ ತಲುಪುತ್ತಿವೆ.

ಲಕ್ಕೂರು, ಮಾಸ್ತಿ, ಟೇಕಲ್​ ಹಾಗೂ ಮಾಲೂರು ಪಟ್ಟಣ ಸೇರಿ ತಾಲೂಕಿನಲ್ಲಿ ಒಟ್ಟು 7 ಪದವಿ ಪೂರ್ವ ಕಾಲೇಜುಗಳಿದ್ದು, ಗ್ರಾಮಾಂತರ ಭಾಗದ ಪದವಿ ಪೂರ್ವ ಕಾಲೇಜುಗಳ ಪರಿಸ್ಥಿತಿ ತ್ರಿಶಂಕು ಸ್ಥಿತಿಯಲ್ಲಿದೆ. ಸರ್ಕಾರಿ ಕಾಲೇಜುಗಳು ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಸೊರಗುತ್ತಿದ್ದು, ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಕಾಲೇಜು ಪ್ರಾರಂಭದ ದಿನಗಳಲ್ಲಿ 200 ರಿಂದ 300 ರವರೆಗೂ ಇದ್ದ ದಾಖಲಾತಿ ಪ್ರಸ್ತುತ 10, 20 ಇಲ್ಲವೆ 40ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ.

ಲಕ್ಕೂರಿನಲ್ಲಿ 1993ರಲ್ಲಿ ಆರಂಭವಾದ ಸರ್ಕಾರಿ ಕಾಲೇಜಿಗೆ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಾ ವಿಭಾಗಕ್ಕೆ ದಾಖಲಾತಿ ಪಡೆದಿದ್ದರು. ಉತ್ತಮ ಲಿತಾಂಶ ಪಡೆಯುತ್ತಿದ್ದ ಕಾಲೇಜಿನಲ್ಲಿ ಪ್ರಸ್ತುತ ಕಲಾ ವಿಭಾಗದಲ್ಲಿ 9, ವಾಣಿಜ್ಯ ವಿಭಾಗದಲ್ಲಿ 25 ಸೇರಿ 32 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಐವರು ಇಲಾಖೆ ಉಪನ್ಯಾಸಕರು ಮತ್ತು ಇಬ್ಬರು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಶೇ.41 ಫಲಿತಾಂಶ ಪಡೆದಿದೆ.

ಹೋಬಳಿ ಕೇಂದ್ರವಾದ ಟೇಕಲ್​ನಲ್ಲಿ 1994ರಲ್ಲಿ ಸರ್ಕಾರಿ ಕಾಲೇಜು ಪ್ರಾರಂಭಿಸಿದ್ದು, ಪ್ರಾರಂಭದಲ್ಲಿ ಸುಮಾರು 120ಕ್ಕೂ ಹೆಚ್ಚು ದಾಖಲಾತಿ ಪಡೆದಿತ್ತು. ಪ್ರಸ್ತುತ ಕಲೆ ಮತ್ತು ವಾಣಿಜ್ಯ ವಿಭಾಗಕ್ಕೆ 36 ವಿದ್ಯಾರ್ಥಿಗಳು ದಾಖಲಾಗಿದ್ದು ಸುಮಾರು ಶೇ.60 ಫಲಿತಾಂಶ ಪಡೆದಿದ್ದರೆ, ಇದೇ ಹೋಬಳಿಯ ದೊಡ್ಡನಾಯಕನಹಳ್ಳಿಯಲ್ಲಿ 2004ರಲ್ಲಿ ತೆರೆದ ಕಾಲೇಜಿನಲ್ಲಿ ನಾಲ್ವರು ಇಲಾಖೆ ಉಪನ್ಯಾಸಕರು, ಮೂವರು ಅತಿಥಿ ಉಪನ್ಯಾಸಕರಿದ್ದು, ಕಲಾ ವಿಭಾಗದಲ್ಲಿ 19 ಹಾಗೂ ವಾಣಿಜ್ಯ ವಿಭಾಗದಲ್ಲಿ 16 ವಿದ್ಯಾರ್ಥಿಗಳು ದಾಖಲಾಗಿ ಶೇ.66 ಫಲಿತಾಂಶ ಪಡೆದಿದ್ದಾರೆ.

ಮಾಸ್ತಿಯಲ್ಲಿರುವ ಕಾಲೇಜು ಅಭಿವೃದ್ಧಿಯಾಗಿರುವ ಕಾರಣ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಗೆ ಬರೋಬ್ಬರಿ 203 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಬಾರಿ ಶೇ.64 ಫಲಿತಾಂಶ ಪಡೆದಿದೆ. ಸರ್ಕಾರಿ 12 ಹಾಗೂ 3 ಅತಿಥಿ ಉಪನ್ಯಾಸಕರಿದ್ದಾರೆ. ಮಾಲೂರು ಪಟ್ಟಣದ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜು ಶೇ.48 ಫಲಿತಾಂಶ ಹಾಗೂ ಬಾಲಕರ ಪದವಿ ಪೂರ್ವ ಕಾಲೇಜು ಶೇ. 42 ಫಲಿತಾಂಶ ಪಡೆದಿದೆ.

ಪ್ರಾಂಶುಪಾಲರ ಹರಸಾಹಸ

ಲಕ್ಕೂರು ಹೋಬಳಿಯ ಗಡಿಭಾಗವಾದ ಡಿ.ಎನ್​.ದೊಡ್ಡಿ ಗ್ರಾಮದಲ್ಲಿ 2007ರಲ್ಲಿ ಪ್ರಾರಂಭವಾದ ಪಿಯು ಕಾಲೇಜಿನಲ್ಲಿ ಪ್ರಸ್ತುತ ಕಲಾ ವಿಭಾಗದಲ್ಲಿ 11, ಕಾಮರ್ಸ್​ಗೆ 14 ವಿದ್ಯಾರ್ಥಿಗಳು ದಾಖಲಾಗಿದ್ದು, ಪ್ರಾಂಶುಪಾಲರು ಸೇರಿ ನಾಲ್ವರು ಅತಿಥಿ ಉಪನ್ಯಾಸಕರಿದ್ದಾರೆ. ಕೆಲ ವಿಷಯಗಳಿಗೆ ಉಪನ್ಯಾಸಕರ ನಿಯೋಜನೆಯೇ ಆಗಿಲ್ಲ. ಇಷ್ಟೆಲ್ಲ ಕೊರತೆಗಳ ನಡುವೆಯೂ ಶೇ.80 ಲಿತಾಂಶ ಪಡೆಯುವ ಮೂಲಕ ಕಾಲೇಜು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ. ಕಸಗುಡಿಸುವುದು, ಬೆಲ್​ ಹೊಡೆಯುವುದು, ಕುಡಿಯುವ ನೀರನ್ನು ತರುವುದನ್ನು ಕೂಡ ಪ್ರಾಂಶುಪಾಲರೇ ಮಾಡಬೇಕಾದ ದುಸ್ಥಿತಿ ಇದೆ.

ಖಾಸಗಿ ದರ್ಬಾರ್​

ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ವ್ಯಾಪ್ತಿಯಲ್ಲಿ ಖಾಸಗಿ ಕಾಲೇಜುಗಳು ವಾಹನ ಸೌಲಭ್ಯ ನೀಡಿರುವುದಲ್ಲದೆ, ದಾಖಲಾತಿಯ ಬಗ್ಗೆ ಎಸ್ಸೆಸ್ಸೆಲ್ಸಿ ಪರೀೆಯ ಹಂತದಲ್ಲೇ ಮನೆ ಮನೆಗೆ ಭೇಟಿ ನೀಡಿ ಕಾಲೇಜಿನ ಸೌಲಭ್ಯ ಹಾಗೂ ಕ್ಯಾಂಪಸ್​ ಸೆಲೆಕ್ಷನ್​ನ ಮಾಹಿತಿಯನ್ನೂ ನೀಡುತ್ತಿದ್ದಾರೆ. ಇದರಿಂದ ಪಾಲಕರೂ ಖಾಸಗಿಯತ್ತ ವಾಲುತ್ತಿದ್ದು, ಇನ್ನಾದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.

ಪಾಲಕರ ಅಸಹನೆ

ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಸೌಲಭ್ಯ ಸರ್ಕಾರ ಏಕೆ ನೀಡುತ್ತಿಲ್ಲ? ಕನಿಷ್ಠ ಪಕ್ಷ ಕಾಲೇಜು ಸಮಯಕ್ಕಾದರೂ ಸರ್ಕಾರಿ ಬಸ್​ ಸೇವೆ ನೀಡಿದರೆ ದಾಖಲಿಸಬಹುದು. ಸರ್ಕಾರಿ ಕಾಲೇಜುಗಳಲ್ಲಿ ಕಟ್ಟಡ ಮಾತ್ರ ಇದೆ. ಮೂಲ ಸೌಲಭ್ಯಗಳಿಲ್ಲ. ವಿಷಯಕ್ಕೆ ತಕ್ಕಂತೆ ಉಪನ್ಯಾಸಕರನ್ನು ನಿಯೋಜನೆ ಮಾಡಿಲ್ಲ, ಗ್ರಂಥಾಲಯ ಇಲ್ಲ. ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಅಭಿವೃದ್ಧಿ ಬಗ್ಗೆ ಸಿಬಿಸಿ ಅಧ್ಯಕ್ಷ ಸದಸ್ಯರಾಗಲಿ ಪ್ರಾಧ್ಯಾಪಕರಾಗಲಿ ಅಸಡ್ಡೆ ತೋರುತ್ತಾರೆ ಎನ್ನುವುದು ಪಾಲಕರ ಅಭಿಪ್ರಾಯವಾಗಿದೆ.

ಕಾಲೇಜು ತರಗತಿಗಳಲ್ಲಿ ನೇರ, ನಿಷ್ಠುರ ಹಾಗೂ ಸ್ನೇಹಪರ ಉಪನ್ಯಾಸಕರಿಲ್ಲ. ಅವರ ಅವಧಿಯಲ್ಲಿ ಬರುತ್ತಾರೆ, ವಿಷಯದ ಬಗ್ಗೆ ಮಾತನಾಡುತ್ತಾರೆ. ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡುವುದಿಲ್ಲ, ವಿಷಯಾಧಾರಿತ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ, ತರಗತಿಗಳಲ್ಲಿ ವಿದ್ಯಾರ್ಥಿಗಳು ವಿಷಯದ ಬಗ್ಗೆ ತಲ್ಲಿನರಾಗುವಂತೆ ಪಾಠ ಪ್ರವಚನ ನೀಡುವುದಿಲ್ಲ, ಇನ್ನು ನಮಗೆ ಆಸಕ್ತಿ ಯಾವ ರೀತಿ ಬರುತ್ತದೆ?

- ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿ

ಸರ್ಕಾರಿ ಪ್ರೌಢಶಾಲೆಗಳಲ್ಲಿ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಮುಗಿದ ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತೆ ಅರಿವು ಮೂಡಿಸಬೇಕು. ಹಲವು ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಖಾಸಗಿ ಕಾಲೇಜುಗಳಿಗೆ ಸೇರುವಂತೆ ಪ್ರೇರೇಪಣೆ ಮಾಡುತ್ತಿರುವುದು ದುರಂತ. ಸರ್ಕಾರಿ ವೇತನ ಪಡೆದು ಹೊಂದಾಣಿಕೆ ಮಾಡಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯವಂತೆ ಹೇಳುತ್ತಿರುವುದು ಇಲಾಖೆಗೆ ದ್ರೋಹ ಬಗೆಯುವ ಕೆಲಸವಾಗಿದೆ.

- ಎ.ವರುಣ್​ಗೌಡ

ಸಿಬಿಸಿ ಸದಸ್ಯ ಲಕ್ಕೂರು

ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳ ಮೇಲೆ ನಂಬಿಕೆ ಬರುವ ಕೆಲಸವನ್ನು ಉಪನ್ಯಾಸಕರು ಹಾಗೂ ಸಿಬಿಸಿ ಸಮಿತಿ ಮಾಡಬೇಕಾಗಿದೆ. ಕಾಲೇಜಿನಲ್ಲಿ 3 ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು ವಿದ್ಯಾರ್ಥಿಗಳ ಬಗ್ಗೆ ಮಾತನಾಡಬೇಕು. ಪ್ರತಿ ತಿಂಗಳು ಹಾಜರಿಯನ್ನು ಅವರ ಪಾಲಕರಿಗೆ ವಾಟ್ಸಪ್​ ಸಂದೇಶ ಕಳುಹಿಸಬೇಕು. ಇನ್ನು ಹಲವು ರೀತಿಯ ಚಟುವಟಿಕೆಗಳನ್ನು ಅಳವಡಿಸಿಕೊಂಡಲ್ಲಿ ಸರ್ಕಾರಿ ಕಾಲೇಜುಗಳು ಉತ್ತಮ ಸ್ಥಿತಿಗೆ ಬರುತ್ತವೆ.

- ಎಂ.ಆಂಜಿನಪ್ಪ

ಸಿಬಿಸಿ ಕಾರ್ಯಧ್ಯಕ್ಷ, ಪ್ರಥಮದರ್ಜೆ ಕಾಲೇಜು ಮಾಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net