ಸರ್ಕಾರಿ ಕಾಲೇಜ್ ಪ್ರಾಂಶುಪಾಲ ನೇಣಿಗೆ ಶರಣು

sucied
ಪ್ರಾಂಶುಪಾಲ ನಾಗರಾಜ ಮುದಗಲ್ಲ
Published on

ಹುನಗುಂದ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲೇ ಪ್ರಾಂಶುಪಾಲ ಮಂಗಳವಾರ ನೇಣಿಗೆ ಶರಣಾಗಿದ್ದಾರೆ.

ಪಟ್ಟಣದ ನಾಗರಾಜ್ ಹ. ಮುದಗಲ್ಲ(57) ಮೃತಪಟ್ಟವರು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನಸುಕಿನ ಜಾವ ಕಾಲೇಜಿನ ಕ್ಯಾಂಟೀನ್ ಸ್ಟೇರ್‌ಕೇಸ್ ಗ್ರಿಲ್‌ಗೆ ನೇಣು ಬಿಗಿದುಕೊಂಡಿದ್ದಾರೆ.

ಮಂಗಳವಾರ ಕಾಲೇಜಿನಲ್ಲಿ ಜಾನಪದ ಜಾತ್ರೆ ಆಯೋಜಿಸಲಾಗಿತ್ತು. ಪೂರ್ವ ಸಿದ್ಧತೆಗಾಗಿ ಸೋಮವಾರ ರಾತ್ರಿ ಕಾರ್ಯಕ್ರಮಕ್ಕೆ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಿ ರಾತ್ರಿ ಕಾಲೇಜಿನಲ್ಲೇ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಮನೆಗೆ ಹೋಗಿ ನಂತರ ಕಾಲೇಜಿಗೆ ಬಂದು ನೇಣು ಹಾಕಿಕೊಂಡಿದ್ದಾರೆ. ಆರು ತಿಂಗಳ ಹಿಂದೆಯಷ್ಟೆ ಇಳಕಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹುನಗುಂದ ಕಾಲೇಜಿಗೆ ವರ್ಗವಾಗಿದ್ದರು. ಇಳಕಲ್ಲ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಪುತ್ರ ಎಂಬಿಬಿಎಸ್ ಕಲಿಯುತ್ತಿದ್ದಾರೆ.

ಸುದ್ದಿ ತಿಳಿದು ಕಾಲೇಜಿನ ವಿದ್ಯಾರ್ಥಿಗಳು, ಪಟ್ಟಣದ ಜನತೆ ಕಾಲೇಜು ಆವರಣದಲ್ಲಿ ಜಮಾಯಿಸಿದ್ದರು. ಸೌಮ್ಯ ಸ್ವಭಾವದ ಪ್ರಾಂಶುಪಾಲರ ಅಸಹಜ ಸಾವು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಘಟನಾ ಸ್ಥಳಕ್ಕೆ ಹುನಗುಂದ ಡಿವೈಎಸ್ಪಿ ಪ್ರಭು ಕಿಳ್ಳೇದಾರ, ಸಿಪಿಐ ಸುರೇಶ ಬೆಂಡಗುಂಬಳ, ಪಿಎಸ್‌ಐ ಚನ್ನಯ್ಯ ದೇವೂರ ಭೇಟಿ ನೀಡಿ ಪರಿಶೀಲಿಸಿದ್ದು, ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net