

ವಿರಾಜಪೇಟೆ: 2018ರಲ್ಲಿ ಅನುಮೋದನೆಗೊಂಡ ಕೋಟ್ಯಂತರ ರೂ. ವೆಚ್ಚದಲ್ಲಿ ಆರಂಭವಾದ ಕಾಲೇಜು ಕಟ್ಟಡದ ಕಾಮಗಾರಿಯು ಅರ್ಧಕ್ಕೆ ನಿಂತು ಹೋಗಿದೆ.
ವಿರಾಜಪೇಟೆಯ ಚಿಕ್ಕಪೇಟೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಾಣವಾಗುತ್ತಿರುವ ಒಂದು ಕೋಟಿ ರೂ. ವೆಚ್ಚದ ಕಾಮಗಾರಿ ಸ್ಥಗಿತವಾಗಿದೆ. 2022ರ ಫೆ.22ಲ್ಲಿ ಅಂದಿನ ಶಾಸಕರು ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಕಾಲೇಜು ಸಮಿತಿಯು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರೂ ಯಾವುದೇ ಉಪಯೋಗವಾಗದ ಕಾರಣ, ರಾಜ್ಯ ಮುಖ್ಯ ಕಾರ್ಯದರ್ಶಿ ಮೊರೆ ಹೋಗಿದ್ದಾರೆ.
ಇದೀಗ 2023-24ರ ಶೈಕ್ಷಣಿಕ ವರ್ಷ ಪೂರ್ಣಗೊಂಡರೂ ಕಟ್ಟಡಕ್ಕೆ ಮುಕ್ತಿ ದೊರಕಿಲ್ಲ. 2022ರ ಫೆಬ್ರವರಿ ತಿಂಗಳಿನಿಂದ ಆರಂಭಗೊಂಡ ಕಾಲೇಜು ಕಟ್ಟಡ ಕಾಮಗಾರಿಯು 2022ರ ಆಗಸ್ಟ್‌ನಲ್ಲಿ ಸ್ಥಗಿತವಾಗಿದೆ. ಅಡಿಪಾಯ ಕಾರ್ಯ ನಡೆದು ನಿರ್ಮಾಣ ಹಂತದಲ್ಲಿ ತಲುಪುವ ಸಂದರ್ಭದಲ್ಲಿಯೇ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸದೆ ಕಾಣೆಯಾಗಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಅಳವಡಿಸಿರುವ ಕಬ್ಬಿಣ ತುಕ್ಕು ಹಿಡಿದಿದೆ. ಕಚ್ಚಾ ಸಾಮಗ್ರಿಗಳು ಹಾಳಾಗುತ್ತಿವೆ. ಹಲವಾರು ಬಾರಿ ಪಂಚಾಯತ್‌ರಾಜ್ ಇಲಾಖೆಯ ಅಭಿಯಂತರರಿಗೆ ಕಾಲೇಜು ಅಭಿವೃದ್ಧಿ ಮಂಡಳಿಯು ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಗುತ್ತಿಗೆದಾರ ಮಾತ್ರ ಕಾಮಗಾರಿ ವಿಳಂಬ ಮಾಡುತ್ತಿದ್ದಾನೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣವಾಗದೆ, ವಿದ್ಯಾರ್ಥಿಗಳು ನಿರಂತರವಾಗಿ ಕೊಠಡಿಯ ಸಮಸ್ಯೆ, ಪ್ರಯೋಗಾಲಯ ಸೇರಿದಂತೆ ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಗುತ್ತಿಗೆದಾರ ವಿಜಯ್‌ಕುಮಾರ್ ಅವರಿಗೆ ಹಲವು ಬಾರಿ ಕಟ್ಟಡ ಕಾಮಗಾರಿಗೆ ಸಂಭಂದಿಸಿದಂತೆ ಇಲಾಖೆಯಿಂದ ಕರೆ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ. ನೋಟಿಸ್ ನೀಡಿದರೂ ಸೂಕ್ತ ವಿಳಾಸವಿಲ್ಲದೆ ವಾಪಸ್ ಬರುವಂತೆ ಆಗಿದೆ. ಕಟ್ಟಡ ಕಾಮಗಾರಿ ಮಾತ್ರ ನಿಂತ ನೀರಿನಂತಾಗಿದೆ. 2023ರಲ್ಲಿ ಪೂರ್ಣವಾಗಬೇಕಾಗಿದ್ದ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದೆ.