ಸಿಎಂ ಕುರ್ಚಿ ಕಿತ್ತಾಟದಲ್ಲಿ ಸರ್ಕಾರ ಪತನ

31 Dwd 4 Jagadish Shettar
Published on

ಹುಬ್ಬಳ್ಳಿ : ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಖಚಿತ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುರ್ಚಿಗಾಗಿ ಕಾಂಗ್ರೆಸ್​ನಲ್ಲಿ ಗುದ್ದಾಟ ಜೋರಾಗಿದೆ. ಈಗಾಗಲೇ ಸಿಎಂ ಕುರ್ಚಿ ಲೆಕ್ಕಾಚಾರದ ಮೇಲೆ ಕಾಂಗ್ರೆಸ್​ನಲ್ಲಿ ಔತಣಕೂಟದ ರಾಜಕೀಯ ನಡೆಯುತ್ತಿದೆ ಎಂದರು.

ಕೆಲ ಸಚಿವರು ಸೇರಿ ಔತಣಕೂಟ ಮಾಡಿದರು. ಎಸ್​ಸಿ, ಎಸ್​ಟಿ ಹಾಗೂ ಕೆಲ ಸಚಿವರ ಔತಣಕೂಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ ಅಡ್ಡಗಾಲು ಹಾಕಿದರು ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್ ಸರ್ಕಾರದ ಪತನದ ಲಕ್ಷಣಗಳು ತೋರುತ್ತಿವೆ ಎಂದು ಹೇಳಿದರು.

ಬಿಜೆಪಿ ಔತಣಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ನಮ್ಮ ಔತಣಕೂಟದ ಬಗ್ಗೆ ಸಂಬಂಧಿಸಿದವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯಲ್ಲಿಯೂ ಸಣ್ಣ, ಪುಟ್ಟ ಸಮಸ್ಯೆಗಳು ಇವೆ. ಅದನ್ನೆಲ್ಲ ಹೈಕಮಾಂಡ್ ಸರಿ ಮಾಡುತ್ತದೆ ಎಂದು ತಿಳಿಸಿದರು.

ಎಸ್​ಸಿ, ಎಸ್​ಟಿ ಜನಾಂಗದ ಸಮಸ್ಯೆಗಳ ಚರ್ಚೆಯ ನೆಪವೊಡ್ಡಿ ಔತಣಕೂಟ ಏರ್ಪಡಿಸಿದ್ದರಂತೆ. ಒಂದು ವೇಳೆ ದಲಿತ ಸಮಾಜದ ಬಗ್ಗೆ ಕಾಂಗ್ರೆಸ್ ಸಚಿವರಿಗೆ ಕಾಳಜಿ ಇದ್ದಿದ್ದರೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಬೇಕಿತ್ತು ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ತಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎನಿಸಿದೆ. ಇದಕ್ಕಾಗಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ. ಇನ್ನೂ ಕೆಲ ದಿನಗಳಲ್ಲಿಯೇ ಕಾಂಗ್ರೆಸ್ ಗುದ್ದಾಟ ಬಹಿರಂಗವಾಗಿಯೇ ನಡೆಯುತ್ತದೆ ಎಂದು ಟೀಕಿಸಿದರು.

ನಕ್ಸಲರ ಶರಣಾಗತಿಯನ್ನು ವೈಭವೀಕರಿಸುವ ಅವಶ್ಯಕತೆ ಸರ್ಕಾರಕ್ಕೆ ಇರಲಿಲ್ಲ. ಶರಣಾಗತಿ ಒಂದು ಕಾನೂನು ಪ್ರಕ್ರಿಯೆ ಅಷ್ಟೇ. ಆದರೆ, ಕಾಂಗ್ರೆಸ್ ಸರ್ಕಾರ ನಕ್ಸಲರ ಶರಣಾಗತಿಯನ್ನೂ ಪ್ರಚಾರಕ್ಕೆ ಬಳಸಿಕೊಂಡಿದೆ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಹತ್ಯೆ ಮಾಡುವ ಪತ್ರ ಬಂದಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಂದಿನ ದಿನಗಳಲ್ಲಿ ಸಿ.ಟಿ. ರವಿ ಅವರಿಗೆ ಏನಾದರೂ ಆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ದೆಹಲಿಯಲ್ಲಿ ಪ್ರಧಾನಿ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ. ಸಂಸದನಾದ ನಂತರ ಪ್ರಧಾನಿಯವರನ್ನು ಭೇಟಿಯಾಗಿರಲಿಲ್ಲ. ಇದೀಗ ಭೇಟಿಯಾಗಿ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ರ್ಚಚಿಸಿದ್ದೇನೆ. ಪಕ್ಷದ ಕೆಲ ಒಳ ವಿಚಾರಗಳ ಬಗ್ಗೆಯೂ ಚರ್ಚೆಗಳಾಗಿವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net