ಕಾಂಗ್ರೆಸ್ ಒಳಜಗಳದಿಂದ ಸರ್ಕಾರ ಪತನ, ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರ ಉದ್ಘಾಟಿಸಿ ಸಂಸದ ಕಾಗೇರಿ ಟೀಕೆ

31sirsi2- Kageri
Published on

ಶಿರಸಿ: ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟು ದಿನ ನಡೆಯಲಿದೆ ಎಂದು ತಿಳಿದಿಲ್ಲ. ಅವರ ತಪ್ಪು ಮತ್ತು ಒಳ ಜಗಳದಿಂದ ಅವರೇ ಸರ್ಕಾರವನ್ನು ಕೆಡವಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


ನಗರದ ದೀನದಯಾಳ ಸಭಾಭವನದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕನ್ನಡವನ್ನೂ ಒಳಗೊಂಡಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ತೀವ್ರ ಹಾನಿ ಆದರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮಿತಿ ಮೀರಿದ ಭ್ರಷ್ಟಾಚಾರ ನಡೆಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕಷ್ಟದಲ್ಲಿರುವವರಿಗೆ ಸಹ ಸ್ಪಂದನೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದ ಬಗ್ಗೆ ಸ್ಪಷ್ಟನೆ ನೀಡುವ ಕಾರ್ಯವನ್ನಷ್ಟೇ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಎಂಬುದನ್ನೂ ಸಹ ನೋಡುತ್ತಿಲ್ಲ ಎಂದರು.


ಬಿಜೆಪಿ ಸದಸ್ಯತಾ ಅಭಿಯಾನವನ್ನು ಕೇಂದ್ರ ಸಚಿವ ಜೆ.ಪಿ. ನಡ್ಡಾ ಉದ್ಘಾಟಿಸಲಿದ್ದು, ಆ ಬಳಿಕ 15 ದಿನಗಳ ಅವಧಿಯಲ್ಲಿ ನಾವೆಲ್ಲ ಈ ಅಭಿಯಾನವನ್ನು ಯಶಸ್ಸುಗೊಳಿಸಬೇಕು. ಶಿರಸಿ ತಾಲೂಕಿನಲ್ಲಿ 40 ಸಾವಿರ, ನಗರದಲ್ಲಿ 25 ಸಾವಿರ ಸದಸ್ಯರ ನೋಂದಣಿ ಗುರಿ ಹೊಂದಿದ್ದೇವೆ. ಸದಸ್ಯತಾ ಅಭಿಯಾನ ಬಿಜೆಪಿಯ ಭದ್ರ ಅಡಿಪಾಯ ಇದ್ದಂತೆ. ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು ಎಂದರು.


ಜಿಲ್ಲೆಯಲ್ಲಿ ಈ ವರ್ಷ ಅತೀ ಹೆಚ್ಚು ಮಳೆಯಾಗಿ ರಸ್ತೆ ಸ್ಥಿತಿ ಶಿಥಿಲವಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಂಡ ತುಂಬುವ ಕಾರ್ಯ ಶೀಘ್ರ ನಡೆಸಲಿದ್ದೇನೆ. ಆದರೆ, ರಾಜ್ಯ ಸರ್ಕಾರ ಸಹಕಾರ ನೀಡದ ಕಾರಣ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಳಂಬವಾಗುತ್ತಿದೆ ಎಂದರು.
ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಆನಂದ ಸಾಲೇರ, ಉಷಾ ಹೆಗಡೆ, ಕುಮಾರ ಬೋರ್ಕರ್, ಸದಾನಂದ ಭಟ್, ವಿವೇಕಾನಂದ ವೈದ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net