ಯಾವುದೇ ಕ್ಷಣದಲ್ಲಾದರೂ ರಾಜ್ಯ ಸರ್ಕಾರ ಪತನ

C.C.PATIL
Published on

ನರಗುಂದ: ರಾಜ್ಯ ಸರ್ಕಾರ ಆಡಳಿತ ಸ್ಥಿಮಿತ ಕಳೆದುಕೊಂಡಿದೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿದ್ದ ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣಕ್ಕೆ ವರ್ಗಾವಣೆ ಮಾಡಿರುವ ಆರೋಪವನ್ನು ಮರೆಮಾಚಲು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೊಸ ನಾಟಕೀಯ ಬೆಳವಣಿಗೆ ಪ್ರಾರಂಭಿಸಿದ್ದಾರೆ. ಸಾಕಷ್ಟು ಹಗರಣಗಳಿಂದ ತುಂಬಿರುವ ರಾಜ್ಯ ಸರ್ಕಾರ ಯಾವುದೇ ಕ್ಷಣದಲ್ಲಿ ಪತವಾದರೆ ಆಶ್ಚರ್ಯಪಡಬೇಕಾಗಿಲ್ಲ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಅಧಿಕಾರದ ತಿಕ್ಕಾಟದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನೇ ಮರೆತಿದೆ. ಕೆಲ ಕಾಂಗ್ರೆಸ್ ಶಾಸಕರು ಡಿಸಿಎಂ ಹುದ್ದೆಗೆ ನಮ್ಮನ್ನೇ ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ಸರ್ಕಾರ ಗೊಂದಲದ ಗೂಡಾಗಿದೆ. ಈ ಜಟಿಲ ಸಮಸ್ಯೆ ಬಗೆಹರಿಸಬೇಕಾದ ಕಾಂಗ್ರೆಸ್ ಹೈಕಮಾಂಡ್ ಕಣ್ಮುಚ್ಚಿ ಕುಳಿತಿದೆ ಎಂದರು.

ಹಗರಣಗಳ ಸರಮಾಲೆಯನ್ನೇ ಹೊಂದಿರುವ ಕಾಂಗ್ರೆಸ್ ಸರ್ಕಾರ ಇದರಿಂದ ಹೊರಬರಲಾರದೆ ತೊಳಲಾಡುತ್ತಿದೆ. ವಾಲ್ಮೀಕಿ ನಿಗಮದ ಉದ್ದೇಶಿತ ಅನುದಾನವನ್ನು ರಾಷ್ಟ್ರೀಕೃತ ಬ್ಯಾಂಕ್‌ನಿಂದ ತೆಲಂಗಾಣಕ್ಕೆ ವರ್ಗಾಯಿಸಿಕೊಂಡು ದುರುಪಯೋಗಪಡಿಸಿಕೊಂಡಿದೆ.

ಈ ಪ್ರಕರಣ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ನಿದ್ದೆಗೇಡಿಸಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದು ಮುಖ್ಯಮಂತ್ರಿ ಏನೂ ಗೊತ್ತಿಲ್ಲದಂತೆ ಸುಮ್ಮನಾಗಿದ್ದಾರೆ.

ಈ ಹಿಂದೆಯೇ ರಾಜ್ಯ ಸರ್ಕಾರ ತನ್ನ ಹಗರಣಗಳನ್ನು ಮುಚ್ಚಿ ಹಾಕಲು ಹುಲಿ ಉಗುರಿನ ವಿಷಯ ಮುನ್ನೆಲೆಗೆ ತಂದು ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಮಾಡಿರುವ ದೋಷಪೂರಿತ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡಿಸಿದೆ.

ಈ ಬಗ್ಗೆ ಅಧಿವೇಶನದಲ್ಲಿ ಬಿಜೆಪಿ ದೊಡ್ಡ ಹೋರಾಟ ನಡೆಸುತ್ತದೆ. ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net