

ಮೈಸೂರು: ಆರ್‌ಎಸ್‌ಎಸ್ ಶಾಖೆ ನಡೆಸದಂತೆ, ಸರ್ಕಾರಿ ಅಧಿಕಾರಿಗಳನ್ನು ಭಾಗವಹಿಸದಂತೆ ತಡೆಯಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಇಂಡಿಯಾ ಫೌಂಡೇಶನ್ ಅಧ್ಯಕ್ಷ ಡಾ.ರಾಮ್‌ಮಾಧವ್ ಹೇಳಿದರು.
ಜನಜಾಗರಣ ಟ್ರಸ್ಟ್, ಮಂಥನ ಮೈಸೂರು ವತಿಯಿಂದ ಶನಿವಾರ ಆಯೋಜಿಸಿದ್ದ ವಿಜಯನಗರ ಒಂದನೇ ಹಂತದಲ್ಲಿರುವ ಜಗನ್ನಾಥ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್‌ನ ವೇದಿಕಾ ಸಭಾಂಗಣದಲ್ಲಿ ಆರ್‌ಎಸ್‌ಎಸ್ ನೂರು ವರ್ಷ ಪೂರೆಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ನೂರು ವರ್ಷದ ಪರಿಕ್ರಮ ಮತ್ತು ಕಾರ್ಯ ವಿಸ್ತಾರ ಕುರಿತು ಅವರು ಮಾತನಾಡಿದರು.
ಆರ್‌ಎಸ್‌ಎಸ್ ಶಾಖೆ ನಡೆಸದಂತೆ, ಸರ್ಕಾರಿ ಅಧಿಕಾರಿಗಳು ಭಾಗವಹಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯಗಳು 30ಕ್ಕೂ ಹೆಚ್ಚು ತೀರ್ಪುಗಳನ್ನು ನೀಡಿವೆ. ಆದರೂ ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ಆದೊಂದು ವೇಳೆ ತಡೆದರೆ ಮತ್ತೊಂದು ಸ್ಥಳಕ್ಕೆ ಹೋಗುತ್ತೇವೆ, ದೇಶ ವಿಶಾಲವಾಗಿದೆ, ಸಹಕರಿಸುವವರೂ ಇದ್ದಾರೆ ಎಂದರು.
ರಾಜಕೀಯವಾಗಿ ಶಕ್ತಿವಂತರಾಗಿ ಗುರುತಿಸಿಕೊಳ್ಳಲು ಕೆಲವು ನಾಯಕರು ಆರ್‌ಎಸ್‌ಎಸ್ ವಿರುದ್ಧ ಮಾತನಾಡುತ್ತಾರೆ. ಅಲ್ಲದೇ ನಿಯಂತ್ರಣಕ್ಕೂ ಮುಂದಾಗುತ್ತಾರೆ. ಆದರೆ ನಾವು ಸಂಘದ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಹಿಡನ್ ಅಜೆಂಡಾ ಹೊಂದಿರುವ ಕೆಲ ನಾಯಕರು ತಮ್ಮ ಬೆಳವಣಿಗೆಗಾಗಿ ಆರ್‌ಎಸ್‌ಎಸ್ ವಿರುದ್ಧ ಮಾತನಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸುವ ರಾಜ್ಯ ಸರ್ಕಾರದ ಯೋಜನೆಯು ಸಂಪೂರ್ಣ ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ಸಂಘಟನೆಯನ್ನು ಕೆಲವರು ನೇರವಾಗಿ ವಿರೋಧಿಸಿದರೂ ಖಾಸಗಿಯಾಗಿ ಸಂಘದ ಚಟುವಟಿಕೆಗಳನ್ನು ಗೌರವಿಸುತ್ತಾರೆ. ಹಾಗಾಗಿ ಸಂಘವು ರಬ್ಬರ್ ಬಾಲ್ ನಂತೆ. ಎಷ್ಟು ಜೋರಾಗಿ ನೆಲಕ್ಕೆ ಬಾರಿಸಿದರೇ, ಅಷ್ಟೇ ಪ್ರಮಾಣದಲ್ಲಿ ವಾಪಸ್ ಚಿಮ್ಮುತ್ತದೆ. ಹತ್ತಿಕ್ಕಿದಷ್ಟು ಸಂಘ ದೊಡ್ಡದಾಗಿ ಬೆಳೆಯುತ್ತದೆ ಎಂದರು.
ಆರ್‌ಎಸ್‌ಎಸ್ ಅರ್ಥ ಮಾಡಿಕೊಳ್ಳದವರು ಸಂಘವನ್ನು ಅಪಾರ್ಥ ಮಾಡಿಕೊಳ್ಳುವುದು ಸುಲಭ ಎಂದು ಪರಿಣಮಿಸಿದ್ದಾರೆ. ಆದರೆ ಸಂಘವು ಅತಿ ಹೆಚ್ಚು ಯುವಕರನ್ನು ಹೊಂದಿದ ಸಂಘಟನೆಯಾಗಿದ್ದು, ಇದು ಈವರೆಗೆ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಇಷ್ಟು ಸವಾಲುಗಳನ್ನು ಎದುರಿಸಿದ ಸಂಘಟನೆ ಇತಿಹಾಸದಲ್ಲಿಯೇ ಇಲ್ಲ ಎಂದು ಹೇಳಿದರು.
ಆದರೆ ಕೆಲವರು ಆರ್‌ಎಸ್‌ಎಸ್ ಬಗ್ಗೆ ಇಲ್ಲ ಸಲ್ಲದ ತಪ್ಪು ಹೇಳಿಕೆಗಳನ್ನು ನೀಡಿ ಸಂಘದ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ. ಆರ್‌ಎಸ್‌ಎಸ್ 1925ರಲ್ಲಿ ಆರಂಭವಾಗಿ ಒಂದು ಸಂಸ್ಥೆಯಾಗಿದ್ದು, ಸಂಘಟನೆಯಲ್ಲ. ಹಾಗಾಗಿ ಇದು ನೋಂದಣಿಯಾಗಿಲ್ಲ ಎಂದು ಸಮರ್ಥಿಸಿಕೊಂಡರು.
ಜನರು ಒಗ್ಗಟಾಗಿರುವುದನ್ನು ಪ್ರೇರೆಪಿಸುವುದು, ಹಿಂದು ಸಂಸ್ಕೃತಿ, ಮೌಲ್ಯವನ್ನು ಸಂರಕ್ಷಿಸಿ, ಸಹನೆ, ಸಹಬಾಳ್ವೆಯಿಂದ ಒಳ್ಳೆಯ ಹಿಂದುವಾಗಿ ಬದುಕುವ ವಾತಾವರಣ ಸೃಷ್ಟಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.
ಸಂಘವು ಒಂದು ಮುಕ್ತವಾದ ಸಂಘಟನೆಯಾಗಿದ್ದು ಒಳಗಿನಿಂದ ಯಾವುದೇ ಐಡಿಯಾಲಜಿಗಳನ್ನು ಅನುಸರಿಸುವುದಿಲ್ಲ. ಜನರಲ್ಲಿ ದೇಶಭಕ್ತಿ ಮೂಡಿಸಲು ದಿನದ 24 ಗಂಟೆ ಕೆಲಸ ಮಾಡುತ್ತದೆ ಎಂದು ಹೇಳಿದರು.
ಆರ್‌ಎಸ್‌ಎಸ್ ಸಂವಿಧಾನದ ವಿರುದ್ಧವಾಗಿಲ್ಲ. ಸಂವಿಧಾನದಲ್ಲಿ ಅಡಕವಾಗಿರುವ ತತ್ವಗಳ ಪಾಲನೆಯ ಧ್ಯೆಯ ಹೊಂದಿದೆ. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸುತ್ತದೆ. ವಿ.ಡಿ.ಸಾವರ್ಕರ್ ದೃಷ್ಟಿಕೋನದ ಹಿಂದುತ್ವ ಸಿದ್ದಾಂತವನ್ನು ಆರ್‌ಎಸ್‌ಎಸ್ ಗೌರವಿಸುತ್ತದೆ. ಆದರೆ ಅದನ್ನು ಅಳವಡಿಸಿಕೊಂಡಿಲ್ಲ ಎಂದರು.
ಆರ್‌ಎಸ್‌ಎಸ್ ಮುಖಂಡ ಜಿ.ವಾಸುದೇವ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ವಿಕ್ರಮ್ ಮುತ್ತಣ್ಣ ಅಧ್ಯಕ್ಷತೆ ವಹಿಸಿದ್ದರು.