ಗ್ಯಾರಂಟಿಗೆ ಹಣ ಕೊಟ್ರೆ ಸರ್ಕಾರ ನಡೆಸಲು ಸಾಧ್ಯವಿಲ್ಲ

27 HHR P 06 (1)
ಹೊಳೆಹೊನ್ನೂರಿನಲ್ಲಿ ಆಯೋಜಿಸಿದ್ದ ರ‌್ಯಾಲಿ ಉದ್ದೇಶಿಸಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಶಾರಾದಾ ಪೂರ‌್ಯಾನಾಯ್ಕಾ, ಅಶೋಕನಾಯ್ಕ, ಕೆ.ಜಿ.ಕುಮಾರಸ್ವಾಮಿ ಇತರರಿದ್ದರು.
Published on

ಹೊಳೆಹೊನ್ನೂರು: ಸರ್ಕಾರದ ಬಜೆಟ್‌ಗಿಂತ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಚ್ಚು ಹಣ ಬೇಕಾದರೆ ಸರ್ಕಾರ ನಡೆಸಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಜನರಿಗೆ ಗ್ಯಾರಂಟಿ ಹೆಸರಲ್ಲಿ ಮಂಕುಬೂದಿ ಎರಚುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಪಟ್ಟಣದಲ್ಲಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾದಿಂದ ಆಯೋಜಿಸಿದ್ದ ರ‌್ಯಾಲಿ ಉದ್ದೇಶಿಸಿ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ದರ ಏರಿಕೆಯಲ್ಲಿ ನಿರತವಾಗಿದ್ದು, ಮದ್ಯದ ಬೆಲೆಯೂ ಹೆಚ್ಚಿಸಿದೆ. ಮದ್ಯದಿಂದ ಕೋಟ್ಯಂತರ ರೂ. ಸಂಗ್ರಹ ಆಗುತ್ತಿದೆ. ಒಂದರ್ಥದಲ್ಲಿ ಸರ್ಕಾರವನ್ನು ಅವರೇ ಮುನ್ನಡೆಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಸದಸ್ಯರೊಬ್ಬರ ಮಗಳ ಹತ್ಯೆ ವೇಳೆಯಲ್ಲಿಯೂ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವ ರಾಜ್ಯ ಸರ್ಕಾರದಿಂದ ಜನರ ರಕ್ಷಣೆ ನೀರಿಕ್ಷಿಸಲು ಸಾಧ್ಯವಿಲ್ಲ. ಓಲೈಕೆ ರಾಜಕಾರಣದಲ್ಲಿ ಮುಳುಗಿರುವ ರಾಜ್ಯ ಸರ್ಕಾರಕ್ಕೆ ಪಕ್ಷದ ಕಾರ್ಯಕರ್ತರ ಹಿತವೂ ಬೇಕಾಗಿಲ್ಲ. ಎಲ್ಲ ವರ್ಗದ ಜನರನ್ನು ಕಡೆಗಣಿಸಿ ಒಂದು ಕೋಮಿಗೆ ಮಣೆಹಾಕುತ್ತಿರುವ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕಾರ್ಯಕರ್ತರ ಪರಿಶ್ರಮದ ಫಲವೇ ತಿಳಿದಿಲ್ಲ. ಸಚಿವ ಮಧು ಬಂಗಾರಪ್ಪ ಅವರಿಗೆ ಕಾರ್ಯಕರ್ತರ ಶಾಪ ತಟ್ಟುವುದು ನಿಶ್ಚಿತ. ಸೋತರೂ ಗೆದ್ದರೂ ಕಾರ್ಯಕರ್ತರಿಗೆ ಕೃತಜ್ಞತೆ ತಿಳಿಸುವುದು ನಾಯಕನ ಜವಾಬ್ದಾರಿ. ಜೆಡಿಎಸ್ ನಲ್ಲಿ ಇದ್ದಾಗಲೂ ಕಾರ್ಯಕರ್ತರ ಕಡೆ ತಿರುಗಿ ನೋಡಲಿಲ್ಲ. ಈ ಬಾರಿಯೂ ಕಾಂಗ್ರೆಸ್ ಕಾರ್ಯಕರ್ತರದ್ದು ಅದೇ ಸ್ಥಿತಿಯಾಗಿದೆ ಎಂದು ಹೇಳಿದರು.
ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಮಾಜಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಡಿ.ಮಂಜುನಾಥ್, ಎಂ.ಎಸ್.ಚಂದ್ರಶೇಖರ್, ರಾಜೇಶ್ ಪಾಟೀಲ್, ಎಸ್.ಶ್ರೀನಿವಾಸ್, ಕಾಂತರಾಜ್, ಸಿದ್ದಪ್ಪ, ಎ.ಕೆ.ರಮೇಶ್, ಬಿಂದು, ಮೋಹನ್ ಪಾಟೀಲ್, ಸುಧಾಮಣಿ, ನಿರ್ಮಲಮ್ಮ, ಶಾಂತಮ್ಮ, ರೇಖಾ ಬೊಸ್ಲೆ, ಜಗದೀಶಪ್ಪಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net