

ನರೇಗಲ್ಲ: ರಾತ್ರಿ ಚಾಲನೆಯ ವೇಳೆ ಹೆಡ್‌ಲೈಟ್ ಹಠಾತ್ ಆಗಿ ಆಫ್ ಆಗಿದ್ದರಿಂದ ಕತ್ತಲಲ್ಲಿಯೇ ಪ್ರಯಾಣಿಕರಿದ್ದ ಸರ್ಕಾರಿ ಬಸ್ ಸಂಚರಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಕೆಎ22 ಎಫ್ 1932 ನಂಬರ್‌ನ ಬಸ್ ಬೆಟಗೇರಿ ಡಿಪೋಗೆ ಸೇರಿದ್ದು, ಗಜೇಂದ್ರಗಡ ಪಟ್ಟಣದಿಂದ ಗದಗಕ್ಕೆ ಸೋಮವಾರ ರಾತ್ರಿಯ ವೇಳೆ ಈ ಘಟನೆ ಸಂಭವಿಸಿದೆ. ಬಸ್ ಮುಂದೆ ಸಾಗುತ್ತಿದ್ದಂತೆ ಆಕಸ್ಮಿಕವಾಗಿ ಅದರ ಹೆಡ್‌ಲೈಟ್‌ಗಳು ಬೆಳಕು ಚೆಲ್ಲುವುದನ್ನು ನಿಲ್ಲಿಸಿದವು. ಈ ಹಿನ್ನೆಲೆಯಲ್ಲಿ ಚಾಲಕ ನರೇಗಲ್ಲ ಪಟ್ಟಣದಿಂದ ಬೆಟಗೇರಿ ಡೀಪೊ ವರೆಗೂ ಕತ್ತಲಲ್ಲಿಯೇ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಗದಗ- ಗಜೇಂದ್ರಗಡ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದ್ದರಿಂದ ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಸರ್ಕಾರಿ ಬಸ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಈ ಸಮಸ್ಯೆ ಆಗಿದೆ. ಪ್ರಯಾಣಿಕರ ಪ್ರಾಣದ ಜತೆ ಸಾರಿಗೆ ಸಂಸ್ಥೆ ಚೆಲ್ಲಾಟವಾಡುವುದು ಎಷ್ಟರ ಮಟ್ಟಿಗೆ ಸರಿ. ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾಯಿತು ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.