ಅನೈತಿಕ ಚಟುವಟಿಕೆ ತಾಣವಾದ ಸರ್ಕಾರಿ ಕಟ್ಟಡ

kolara
Published on

ಕೋಲಾರ: ನಾಗರಿಕರ ಸಮಸ್ಯೆಗಳಿಗೆ ಪರಿಹಾರ, ಸರ್ಕಾರದ ಸೌಲಭ್ಯ ವಿತರಣೆ ಸೇರಿ ಹಲವು ಉದ್ದೇಶಗಳನ್ನಿಟ್ಟುಕೊಂಡು ಕಟ್ಟಿದ ಸರ್ಕಾರಿ ಕಚೇರಿಗಳು ಸದಾ ಬೀಗ ಹಾಕಿದ್ದರಿಂದ ಈಗ ಅನೈತಿಕ ಚಟುವಟಿಕೆಯ ತಾಣಗಳಾಗಿ ಮಾರ್ಪಡುತ್ತಿವೆ.

ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಲು ಕಟ್ಟಿಸಿದ್ದ ಕಟ್ಟಡಕ್ಕೆ ಬೀಗ ಜಡಿದಿದ್ದರಿಂದ ಕೊಠಡಿಗಳು ಪಾಳುಕೊಂಪೆಗಳಾಗಿವೆ.

ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಕೃಷಿ ಕೇಂದ್ರ ಮತ್ತು ಶುಶ್ರೂಷಕಿಯರ ವಸತಿ ಕೇಂದ್ರಗಳು ನಿರ್ವಹಣೆಯಿಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಸುತ್ತ ಮುತ್ತಲ ಅಂಗಡಿ ಮಾಲೀಕರು ತ್ಯಾಜ್ಯವನ್ನು ಕಚೇರಿಗಳ ಮುಂದೆ ಸುರಿಯುತ್ತಿದ್ದಾರೆ. ಇದರಿಂದ ಗಬ್ಬು ನಾರುತ್ತಿದ್ದು, ಗ್ರಾಮಸ್ಥರು ದುರ್ವಾಸನೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ.

ಕಚೇರಿಗಳಲ್ಲಿ ಕೂರಬೇಕಾಗಿದ್ದ ಅಧಿಕಾರಿಗಳು ನಗರದಲ್ಲಿದ್ದು, ಅವರನ್ನು ಹುಡುಕಿ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಸಾರ್ವಜನಿಕರದ್ದಾಗಿದೆ. ಸಾರ್ವಜನಿಕರು ಅಧಿಕಾರಿಗಳನ್ನು ಹುಡುಕಿ ಅಲೆದಾಡುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಅಧಿಕಾರಿಗಳು ಕಚೇರಿಯಲ್ಲಿ ಇರುವಂತೆ ಕಚೇರಿ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಅರಾಭಿಕೊತ್ತನೂರು ಗ್ರಾಮದ ಹೃದಯ ಭಾಗದಲ್ಲಿರುವ ಕೃಷಿ ಕೇಂದ್ರ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಮತ್ತು ಶುಶ್ರೂಷಕಿಯರ ವಸತಿ ಕೇಂದ್ರದ ಕೊಠಡಿಗಳು ಸುಮಾರು ವರ್ಷಗಳಿಂದ ಖಾಲಿ ಬಿದ್ದಿದ್ದು, ಪಾಳು ಬೀಳುವ ಸ್ಥಿತಿಯಲ್ಲಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳಿಗೆ ಗ್ರಾಮ ಪಂಚಾಯಿತಿಯಿಂದ ಪತ್ರ ಬರೆದಿದ್ದು, ಆ ಕೊಠಡಿಗಳನ್ನು ಪಂಚಾಯಿತಿ ವ್ಯಾಪ್ತಿಗೆ ನೀಡಿದರೆ ಸ್ವಚ್ಛಗೊಳಿಸಿ ಅಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗುವುದು. ಆದರೆ ಸಂಬಂಧಿಸಿದ ಇಲಾಖೆಗಳವರು ಇದುವರೆವಿಗೂ ನಮ್ಮ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 -ಶಾಲಿನಿ

ಅರಾಭಿಕೊತ್ತನೂರು ಪಿಡಿಒ

ಗ್ರಾಮದ ಹೃದಯಭಾಗದಲ್ಲಿ ಕೊಠಡಿಗಳು ಪಾಳು ಬೀಳುವ ಸ್ಥಿತಿಯಲ್ಲಿದ್ದು, ಕಚೇರಿಗಳ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸದರಿ ಕೊಠಡಿಗಳನ್ನು ಬೇರೆ ಇಲಾಖೆಗಳಿಗೆ ನೀಡಬೇಕು. ಅಥವಾ ಪಂಚಾಯಿತಿ ವ್ಯಾಪ್ತಿಗೆ ತೆಗೆದುಕೊಳ್ಳಿ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಗಳು ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ.

-ಶ್ರೀಧರ್​, ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ

"ಗ್ರಾಮೀಣ ಭಾಗದ ಜನರು ಅಧಿಕಾರಿಗಳನ್ನು ಹುಡುಕಿಕೊಂಡು ನಗರ ಪ್ರದೇಶಕ್ಕೆ ಹೋಗಬಾರದು ಎಂದು ಗ್ರಾಮಪಂಚಾಯಿತಿಯಿಂದ ಕೇಂದ್ರಗಳ ವ್ಯಾಪ್ತಿಯಲ್ಲಿಯೇ ಅಧಿಕಾರಿಗಳು ಸಿಗಬೇಕೆಂದು ಅವರಿಗೆ ಕಚೇರಿಗಳಿಗಾಗಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಆ ಕಚೇರಿಗಳ ಬಾಗಿಲುಗಳನ್ನು ಅಧಿಕಾರಿಗಳು ತೆಗೆಯದೇ ಇರುವುದರಿಂದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಗ್ರಾಮಪಂಚಾಯ್ತಿಯವರು ಕಚೇರಿಗಳ ಮುಂಭಾಗ ಸ್ವಚ್ಛಗೊಳಿಸುವ ಕೆಲಸ ಮಾಡಿಲ್ಲ. ಜಿಲ್ಲಾಡಳಿತಕ್ಕೆ ದೂರು ನೀಡುವ ಕೆಲಸ ಗ್ರಾಮಪಂಚಾಯ್ತಿಯವರು ಮಾಡಬೇಕಾಗಿದೆ."

 -ಮೋಹನ್​ ಅರಾಭಿಕೊತ್ತನೂರು ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net