ಅರ್ಹರಿಗೆ ಸಿಗದ ಸರ್ಕಾರಿ ಸೌಲಭ್ಯ

 40 ವರ್ಷಗಳಿಂದ ಗುಡಿಸಲಿನಲ್ಲೇ ವಾಸ ಮಾಡುತ್ತಿರುವ ಶಿವಣ್ಣ.
40 ವರ್ಷಗಳಿಂದ ಗುಡಿಸಲಿನಲ್ಲೇ ವಾಸ ಮಾಡುತ್ತಿರುವ ಶಿವಣ್ಣ.
Published on

ನಂಜನಗೂಡು: ದೇವರು ವರ ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದ್ದು, ಹಲವು ವರ್ಷಗಳಿಂದ ಪುಟ್ಟ ಗುಡಿಸಿಲಿನಲ್ಲಿ ವಾಸ ಮಾಡುತ್ತಿರುವವರಿಗೆ ಮನೆ ನಿರ್ಮಾಣದ ಮಂಜೂರಾತಿ ಪತ್ರ ಸಿಗದ ಕಾರಣ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಮಳೆ, ಬಿಸಿಲು ಎನ್ನದೆ ಈ ಬಡ ಕುಟುಂಬ ಕಷ್ಟದಲ್ಲೇ ಬದುಕು ಸಾಗಿಸಬೇಕಿದೆ. ನಮಗೆ ಮನೆ ಕಟ್ಟಿಕೊಡಿ...ಇಲ್ಲ ಒಂದು ತೊಟ್ಟು ವಿಷ ಕೊಟ್ಟು ಬಿಡಿ ಎಂದು ಈ ಬಡ ಕುಟುಂಬ ಅಂಗಲಾಚುತ್ತಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದ ತಾಲೂಕಿನ ಹೆಡತಲೆ ಗ್ರಾಮದ ನಿವಾಸಿಗಳಾದ ರತ್ನಮ್ಮ ಹಾಗೂ ಶಿವಣ್ಣ ಸಂಕಷ್ಟಕ್ಕೆ ಸಿಲುಕಿ ನರಳಾಡುತ್ತಿದ್ದಾರೆ.

ಹದಿನೈದು ವರ್ಷಗಳ ಹಿಂದೆ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ರತ್ನಮ್ಮ ಅವರ ಮಣ್ಣಿನ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದರು. ಅಂತೆಯೆ ಶಿವಣ್ಣ ಕುಟುಂಬ 40 ವರ್ಷಗಳಿಂದ ತೆಂಗಿನ ಗರಿಯ ಗುಡಿಸಿನಲ್ಲಿಯೇ ವಾಸ ಮಾಡುತ್ತಿದ್ದು, ಮಳೆ ಬಂದರೆ ಸೋರುತ್ತದೆ. ವಿದ್ಯುತ್ ದೀಪವಿಲ್ಲದ ಪರಿಣಾಮ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಯಲ್ಲೊಂದಾದ ಗೃಹಜೋತಿ ಯೋಜನೆಯಿಂದಲೂ ಈ ಕುಟುಂಬ ವಂಚಿತವಾಗಿದೆ. ಮನೆ ನಿರ್ಮಾಣ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಅನೇಕ ಬಾರಿ ಅಂಗಲಾಚಿ ಬೇಡಿದರೂ ಗ್ರಾಮ ಪಂಚಾಯಿತಿ ಆಡಳಿತ ತಲೆಕೆಡಿಸಿಕೊಂಡಿಲ್ಲ. ಮನೆ ಪರಿಸ್ಥಿತಿ ನೋಡಿ ನಮ್ಮ ಹೆಣ್ಣು ಮಕ್ಕಳು ತವರು ಮನೆಗೆ ಬರುತ್ತಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

15 ವರ್ಷ ಕಳೆದರೂ ಹೆಡತಲೆ ಗ್ರಾಮ ಪಂಚಾಯಿತಿ ಆಡಳಿತ ಈ ಎರಡು ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ವ್ಯವಸ್ಥೆ ಮಾಡಿಲ್ಲ. ಅಲ್ಲದೆ ಮನೆ ಇದ್ದವರಿಗೆ ಮತ್ತೆ ಮನೆಗಳನ್ನು ಮಂಜೂರು ಮಾಡಿದೆ ಎಂಬುದು ಸ್ಥಳೀಯರ ಆರೋಪ. ಮನೆ ಕೇಳಿದರೆ ನಿಮಗೆ ವಯಸ್ಸಾಗಿದೆ ಮನೆ ಕೊಡುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ. ಮಳೆ ಬಂದಾಗ ನೀರು ಮನೆಗೆ ನುಗ್ಗುತ್ತದೆ. ಇದರಿಂದ ನಮಗೆ ಬದುಕಲು ತುಂಬಾ ಕಷ್ಟವಾಗುತ್ತಿದೆ. ಮನೆ ಕಟ್ಟಿ ಕೊಡಿ ಇಲ್ಲ ಒಂದು ತೊಟ್ಟು ವಿಷವನ್ನಾದರೂ ಕೊಟ್ಟು ಬಿಡಿ ಎಂದು ಅಳಲು ತೋಡಿಕೊಂಡರು.

ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬ ಇದಾಗಿದ್ದು, ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದೆಯಾದರೂ ಇಂತಹ ನಿರ್ಗತಿಕ ಬಡ ಕುಟುಂಬಗಳಿಗೆ ಸೌಲಭ್ಯ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇನ್ನಾದರೂ ನೊಂದ ಕುಟುಂಬಗಳಿಗೆ ಸಂಬಂಧಪಟ್ಟವರು ಆಸರೆಯಾಗಿ ಸೂರು ಕಲ್ಪಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

ಗ್ರಾಮದ ರತ್ನಮ್ಮ ಅವರ ಮನೆ ಮಳೆಯಿಂದ ಕುಸಿದು ಬಿದ್ದ ಸಂದರ್ಭದಲ್ಲಿ ಐವತ್ತು ಸಾವಿರ ರೂ. ಪರಿಹಾರ ನೀಡಲಾಗಿತ್ತು. ಪರಿಹಾರ ನೀಡಿರುವ ಕಾರಣ ಮನೆ ಮಂಜೂರು ಮಾಡಲು ಜಿಪಿಎಸ್‌ನಲ್ಲಿ ಆಗುತ್ತಿಲ್ಲ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಎರಡೂ ಕುಟುಂಬಗಳಿಗೂ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.

ರಾಜಶೇಖರಮೂರ್ತಿ ಪಿಡಿಒ, ಹೆಡತಲೆ ಗ್ರಾಮ ಪಂಚಾಯಿತಿ

ಹೆಡತಲೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಮಳೆಯಿಂದಾಗಿ ಮನೆ ಕುಸಿದು ಬಿದ್ದಿತ್ತು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡುವ ಕಾಳಜಿ ತೋರಿಸುತ್ತಿಲ್ಲ.

ಶಂಕರ ನಾಯಕ ಜಿಲ್ಲಾ ಉಪಾಧ್ಯಕ್ಷ, ರೈತ ಸಂಘ

15 ವರ್ಷಗಳ ಹಿಂದೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಮನೆ ಗೋಡೆ ಕುಸಿದು ಬಿದ್ದಿತ್ತು. ಮನೆಯಲ್ಲಿದ್ದ ನಾವು ಪ್ರಾಣಾಪಾಯದಿಂದ ಪಾರಾಗಿದ್ದೆವು. ಬಿಸಿಲು-ಮಳೆ ಎನ್ನದೆ ಇದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮನೆ ಮಂಜೂರು ಮಾಡಿಕೊಡಿ ಎಂದು ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಮನೆ ಇಲ್ಲದೆ ನನ್ನ ಮಗನಿಗೂ ಮದುವೆ ಮಾಡಿಲ್ಲ. ದಯಮಾಡಿ ನನಗೊಂದು ಮನೆ ಕೊಡಿ.

ರತ್ನಮ್ಮ ಹೆಡತಲೆ ನಿವಾಸಿ

ಸುಮಾರು 40 ವರ್ಷಗಳಿಂದ ನಾವು ಗುಡಿಸಿಲಿನಲ್ಲಿ ವಾಸಿಸುತ್ತಿದ್ದೇವೆ. ಮಳೆ ಬಂದರೆ ಸೋರುತ್ತದೆ. ಮನೆ ನಿರ್ಮಾಣ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಳೆ ಬಂದ ಸಂದರ್ಭದಲ್ಲಿ ಬೇರೆಯವರ ಮನೆಗೆ ಹೋಗಿ ಮಲಗುತ್ತೇವೆ. ಮನೆ ಇದ್ದವರಿಗೆ ಮನೆಯನ್ನು ಕೊಡುತ್ತಿದ್ದಾರೆ. ಮನೆ ಇಲ್ಲದಿರುವ ನಮ್ಮಂತವರಿಗೆ ಅಧಿಕಾರಿಗಳು ಸೌಲಭ್ಯ ನೀಡುತ್ತಿಲ್ಲ.

ಶಿವಣ್ಣ ಹೆಡತಲೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net